ಬಸವರಾಜ್ ಬೊಮ್ಮಾಯಿ ಅಪ್ತ ಕಾರ್ಯದರ್ಶಿಯ ಪುತ್ರ ಆತ್ಮಹತ್ಯೆ
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅಪ್ತ ಕಾರ್ಯದರ್ಶಿ(ಪಿಎಸ್) ಅವರ ಪುತ್ರ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಸಂಜಯನಗರದ ಲೊಟ್ಟೆಗೊಲ್ಲಹಳ್ಳಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಲೊಟ್ಟೆಗೊಲ್ಲಹಳ್ಳಿಯ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಅವರ ಆಪ್ತ ಕಾರ್ಯದರ್ಶಿ ಚಂದ್ರು ಪುತ್ರ ಹೇಮಂತ್ (೨೦) ಆತ್ಮಹತ್ಯೆ ಮಾಡಿಕೊಂಡವರು.ತಂಗಿಗೆ ಆಭರಣ ಕೊಡಿಸಿದ್ದಕ್ಕೆ ತಾಯಿಯೊಂದಿಗೆ ಜಗಳವಾಡಿದ್ದ ಹೇಮಂತ್,ಕುಟುಂಬದವರ ಜೊತೆ ತಿರುಪತಿಗೆ ತೆರಳುವ ಸಿದ್ದತೆಯಲ್ಲಿದ್ದಾಗಲೇ ಈ ದುರಂತ ನಡೆದಿದೆ. ಹೇಮಂತ್‌ನ ತಂಗಿಗೆ ಆಭರಣ ಕೊಡಿಸಲಾಗಿತ್ತು.
ಈ ಸಂಬಂಧ ತಾಯಿ ಜೊತೆ ಹೇಮಂತ್ ಜಗಳ ಮಾಡಿಕೊಂಡಿದ್ದನು. ತಂಗಿಗೆ ಕೇಳಿದ್ದೆಲ್ಲಾ ಕೊಡಿಸುತ್ತೀರಾ ನನಗೇನೂ ಕೊಡಿಸಲ್ಲ ಎಂದು ಕೋಪದಲ್ಲಿ ಕೋಣೆಗೆ ಹೋಗಿದ್ದ ಹೇಮಂತ್ ಬಾಗಿಲು ಹಾಕಿಕೊಂಡಿದ್ದನು.ರಾತ್ರಿ ಊಟಕ್ಕೂ ಕರೆದರೂ ಹೇಮಂತ್ ಕೋಣೆಯಿಂದ ಹೊರಗೆ ಬಂದಿರಲಿಲ್ಲ.
ರಾತ್ರಿ ಸುಮಾರು ೮ ಗಂಟೆವರೆಗೂ ಸ್ನೇಹಿತರೊಂದಿಗೆ ಮೊಬೈಲ್‌ನಲ್ಲಿ ಮಾತನಾಡಿದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ರಾತ್ರಿ ಸುಮಾರು ೧೨ ಗಂಟೆಗೆ ಹೇಮಂತ್ ನೇಣುಬಿಗಿದುಕೊಂಡಿರುವ ಸಾಧ್ಯತೆಗಳಿವೆ.
ತಿರುಪತಿಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದರಿಂದ ಮನೆಗೆ ಸಂಬಂಧಿಕರು ಸಹ ಆಗಮಿಸಿದ್ದರು.ಹೇಮಂತ್ ರಾಮಯ್ಯ ಕಾಲೇಜಿನಲ್ಲಿ ಡಿಪ್ಲೋಮಾ ಅಂತಿಮ ವರ್ಷದಲ್ಲಿ ಓದುತ್ತಿದ್ದನು.




