ನರೇಗಾ ಮರುಸ್ಥಾಪನೆಗೆ ಒತ್ತಾಯ: ಕೊಳ್ನಾಡು ಗ್ರಾಮ ಪಂಚಾಯತ್ ಸಾಮನ್ಯ ಸಭೆಯಲ್ಲಿ ಬಹುಮತದ ತೀರ್ಮಾನ
ನರೇಗಾ ಮರುಸ್ಥಾಪನೆಗೆ ಒತ್ತಾಯ: ಕೊಳ್ನಾಡು ಗ್ರಾಮ ಪಂಚಾಯತ್ ಸಾಮನ್ಯ ಸಭೆಯಲ್ಲಿ ಬಹುಮತದ ತೀರ್ಮಾನ
ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಶ್ರಫ್ ಕೆ. ಸಾಲೆತ್ತೂರು ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷರಾದ ಕೆ.ಎ. ಅಸ್ಮ ಹಸೈನಾರ್ ತಾಳಿತ್ತನೂಜಿ ಉಪಸ್ಥಿತರಿದ್ದರು.
ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಹೆಸರನ್ನು ಬದಲಾಯಿಸಿ ‘ವಿಕಸಿತ ಭಾರತ ಉದ್ಯೋಗ ಖಾತರಿ ಅಜೀವಿಕ ಅಭಿಯಾನ’ ಎಂದು ಮರುನಾಮಕರಣ ಮಾಡಿರುವ ಕುರಿತು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿ.ಡಿ.ಓ) ಸಭೆಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರೂ ಹಿರಿಯ ಸದಸ್ಯರಾದ ಶ್ರೀ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು, ನರೇಗಾ ಯೋಜನೆಯ ಮೂಲ ಸ್ವರೂಪವನ್ನು ಕೈಬಿಟ್ಟು ವಿಬಿ.ರಾಮ್ ಜಿ ಯೋಜನೆ ಜಾರಿಗೆ ತರಲಾಗಿರುವುದನ್ನು ಖಂಡಿಸಿದರು. ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನೇ ಮರುಸ್ಥಾಪಿಸಬೇಕೆಂದು ಅವರು ಒತ್ತಾಯಿಸಿದರು.
ಈ ವಿಷಯವಾಗಿ ಸಭೆಯಲ್ಲಿ ಚರ್ಚೆ ನಡೆದಿದ್ದು, ಹಾಜರಿದ್ದ 29 ಸದಸ್ಯರ ಪೈಕಿ 20 ಮಂದಿ ಸದಸ್ಯರು ಸುಭಾಶ್ಚಂದ್ರ ಶೆಟ್ಟಿಯವರ ಅಭಿಪ್ರಾಯಕ್ಕೆ ಒಕ್ಕೊರಲ ಒಪ್ಪಿಗೆ ಸೂಚಿಸಿದರು. ಎಂಟು ಮಂದಿ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಬಹುಮತದ ಆಧಾರದ ಮೇಲೆ, ಸದ್ರಿ ನರೇಗಾ ಯೋಜನೆ ಹಾಗೂ ಅದರ ಹೆಸರು–ಸ್ವರೂಪವನ್ನು ಹಿಂದಿನಂತೆಯೇ ಮುಂದುವರಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಪತ್ರ ಬರೆಯುವಂತೆ ಸಾಮನ್ಯ ಸಭೆಯಲ್ಲಿ ಬಹುಮತದ ನಿರ್ಣಯ ಕೈಗೊಳ್ಳಲಾಯಿತು

ಸಾಮಾನ್ಯ ಸಭೆಯಲ್ಲಿ ಹಿರಿಯ ಸದಸ್ಯರಾದ ಜಯಂತಿ ಎಸ್. ಪೂಜಾರಿ, ಅಬ್ದುಲ್ ಹಮೀದ್ ಸುರಿಬೈಲ್, ಶ್ರೀಮತಿ ನೆಬಿಸಾ, ಶ್ರೀಮತಿ ರತ್ನಾ, ಸಂಜೀವಿ, ಶ್ರೀಮತಿ ಭಾಗೀರಥಿ, ಶ್ರೀ ಪದ್ಮನಾಭ ಕುಳಾಲು, ಅಬ್ದುಲ್ ರಜಾಕ್, ಶ್ರೀಮತಿ ಸುಲೋಚನಾ ರೈ, ಶ್ರೀಮತಿ ಸವಿತಾ ಬರ್ಕಳ, ನತಾಲಿಯಾ ಕುಟಿನಾ, ಶ್ರೀಮತಿ ದೇವಕಿ, ಲವೀನಾ ಪೆರಾವೋ, ಜಯಂತಿ ಜನಾರ್ದನ ಗೌಡ, ಅಬ್ದುಲ್ ರಜಾಕ್ ಸೆರ್ಕಳ, ಪ್ರಶಾಂತ್ ಶೆಟ್ಟಿ ಅಗರಿ, ಲೋಹಿತ್, ಅನಿತಾ ಶೆಟ್ಟಿಗಾರ್, ಸೌಮ್ಯಲತಾ ಕಾಡುಮಠ, ಶ್ರೀ ರಾಜರಾಂ ಹೆಗ್ಡೆ, ಶಶಿಕಲಾ, ಹರೀಶ್ ಟೈಲರ್, ಮಹಮ್ಮದ್ ಮಂಚಿ, ಕೃಷ್ಣಪ್ಪ ಪೂಜಾರಿ ಹಾಗೂ ಎ.ಬಿ. ಅಬ್ದುಲ್ಲಾ ಭಾಗವಹಿಸಿದ್ದರು. ದ್ವಿತೀಯ ಲೆಕ್ಕ ಪರಿಶೋಧಕ ದಿನೇಶ್ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹರೀಶ್ ಸಭೆಯನ್ನು ಸ್ವಾಗತಿಸಿ ಧನ್ಯವಾದ ತಿಳಿಸಿದರು.




