ಮಂಗಳೂರು: ದೈವದ ಮೂರ್ತಿ, ಪೂಜಾ ಪರಿಕರ ಕಳವು: ಇಬ್ಬರು ಆರೋಪಿಗಳ ಬಂಧನ
ಮಂಗಳೂರು: ದೈವದ ಮೂರ್ತಿ ಹಾಗೂ ಅದಕ್ಕೆ ಸಂಬಂಧಿಸಿದ ಪೂಜಾ ಪರಿಕರಗಳನ್ನು ಕದ್ದ ಕಳ್ಳರನ್ನು ಸುರತ್ಕಲ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರನ್ನು ವಾಜೀದ್ ಜೆ @ ವಾಜಿ ಮತ್ತು ಸಯ್ಯದ್ ಆಲಿ ಎಂದು ಗುರುತಿಸಲಾಗಿದೆ. ಕುಳಾಯಿ ಗ್ರಾಮದ ಅಮಿತಾ ಎಂಬುವವರ ತಾಯಿ ಮನೆಯಲ್ಲಿ ದೈವಗಳ ಆರಾಧನೆ ನಡೆಯುತ್ತಿತ್ತು. ಆದರೆ ಮನೆಯಲ್ಲಿ ಯಾರೂ ಖಾಯಂ ಆಗಿ ವಾಸವಿಲ್ಲ. ದೈವಗಳ ಮೂರ್ತಿಗಳು ಹಾಗೂ ಅದಕ್ಕೆ ಸಂಬಂಧಪಟ್ಟ ಪೂಜಾ ಪರಿಕರಗಳು ಇದ್ದು ಆ ಮನೆಯಲ್ಲಿ ಯಾರೂ ವಾಸವಿರದೇ ಕೇವಲ ಪೂಜೆ ಮಾಡಿ ದೀಪ ಹಚ್ಚಿ ನಂತರ ಬೀಗ ಹಾಕುತ್ತಿದ್ದರು.
ಯಾರೂ ವಾಸವಿಲ್ಲದ ಈ ಮನೆಯನ್ನೇ ಗುರಿಯಾಗಿಸಿಕೊಂಡ ಕಳ್ಳರು, ಕಳೆದ ತಿಂಗಳು ಡಿಸೆಂಬರ್ 26ರ ರಾತ್ರಿ ಹಂಚು ತೆಗೆದು ಒಳಪ್ರವೇಶಿಸಿದ್ದರು. ಪೊಸಪ್ಪೆ ದೈವ, ಮಂತ್ರದೇವತೆ, ಕಲ್ಲುರ್ಟಿ ಪಂಜುರ್ಲಿ ದೈವಗಳ ಮೂರ್ತಿಗಳು, ಬೆಳ್ಳಿಯ ಕಡ್ಸಲೆ (ಖಡ್ಗ), ಘಂಟೆ ಹಾಗೂ ಎಲ್.ಇ.ಡಿ ಟಿವಿ ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ಹೊತ್ತೊಯ್ದಿದ್ದರು. ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ದಾಖಲಿಸಿಕೊಂಡು ಸುರತ್ಕಲ್ ಪೊಲೀಸರು ಕೃತ್ಯ ನಡೆದ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು, ತಾಂತ್ರಿಕ ವಿಧಾನಗಳನ್ನು ಪರಿಶೀಲನೆ ನಡೆಸಿ ಆರೋಪಿ ವಾಜೀದ್ ನನ್ನು ಅರೆಸ್ಟ್ ಮಾಡಿದ್ದಾರೆ.
ಬಳಿಕ ಆರೋಪಿಯನ್ನು ವಿಚಾರಮೆ ನಡೆಸಿದಾಗ ಮನೆಕಳ್ಳತನ ಮಾಡಿದ ಮಾಲಿನಲ್ಲಿ ಹಿತ್ತಾಳೆ ಹಾಗೂ ತಾಮ್ರದ ಸಾಮಾಗ್ರಿಗಳನ್ನು ಜೋಕಟ್ಟೆಯ ಸಯ್ಯದ್ ಆಲಿ ಎಂಬಾತನಿಗೆ ಮಾರಾಟ ಮಾಡಿದ್ದಾಗಿ ತಿಳಿಸಿದ್ದಾನೆ. ಈ ಹಿನ್ನಲೆ ದಿನಾಂಕ: 27.01.2026 ರಂದು ಸಯ್ಯದ್ ಆಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.




