ಪ್ರಜಾಪ್ರಭುತ್ವ ಉಳಿಸಲು ಹಾಗೂ ಫ್ಯಾಶಿಸಂ ಮುಕ್ತ ಭಾರತಕ್ಕಾಗಿ ಸಂಘಟಿತ ಹೋರಾಟ ಅಗತ್ಯ: ಅನ್ವರ್ ಸಾದಾತ್ ಬಜತ್ತೂರು
ಪುತ್ತೂರು:“ನಮ್ಮ ದೇಶದ ಪ್ರಜಾಪ್ರಭುತ್ವದ ಅಡಿಪಾಯಕ್ಕೆ ಫ್ಯಾಸಿಸಂ ಇಂದು ದೊಡ್ಡ ಬೆದರಿಕೆಯಾಗಿ ಪರಿಣಮಿಸಿದೆ. ಸಂವಿಧಾನದ ಆಶಯಗಳನ್ನು ಬುಡಮೇಲು ಮಾಡುತ್ತಿರುವ ಫ್ಯಾಸಿಸ್ಟ್ ಶಕ್ತಿಗಳನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಎಸ್‌ಡಿಪಿಐ ಕಾರ್ಯಕರ್ತರು ಕಟಿಬದ್ಧರಾಗಿ ಶ್ರಮಿಸಬೇಕು” ಎಂದು ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದಾತ್ ಬಜತ್ತೂರು ಕರೆ ನೀಡಿದರು.
ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ವತಿಯಿಂದ ಬನ್ನೂರು ಜಂಕ್ಷನ್‌ನಲ್ಲಿ ಆಯೋಜಿಸಲಾಗಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನತೆ ಮತ್ತು ನ್ಯಾಯವನ್ನು ಒದಗಿಸಿರುವುದು ನಮ್ಮ ಸಂವಿಧಾನ. ಆದರೆ ಇತ್ತೀಚಿನ ದಿನಗಳಲ್ಲಿ ಸಾಂವಿಧಾನಿಕ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ಫ್ಯಾಸಿಸ್ಟ್ ಸಿದ್ಧಾಂತಗಳನ್ನು ಜನರ ಮೇಲೆ ಹೇರಲಾಗುತ್ತಿದೆ. ಇಂತಹ ಶಕ್ತಿಗಳನ್ನು ಮೆಟ್ಟಿ ನಿಲ್ಲುವುದು ಇಂದಿನ ತುರ್ತು ಅಗತ್ಯವಾಗಿದೆ. ಸಾಮಾಜಿಕ ನ್ಯಾಯದ ಹಾದಿಯಲ್ಲಿ ಎಸ್‌ಡಿಪಿಐ ಸದಾ ಮುಂಚೂಣಿಯಲ್ಲಿದ್ದು,ಪ್ರಜಾಪ್ರಭುತ್ವ ಉಳಿಸಲು ಹಾಗೂ ಫ್ಯಾಸಿಸಂ ಮುಕ್ತ ಭಾರತ ನಿರ್ಮಿಸಲು ಕಾರ್ಯಕರ್ತರು ಜನಸಾಮಾನ್ಯರ ಜೊತೆಗೂಡಿ ಹೋರಾಡಬೇಕೆಂದು ಅವರು ಪ್ರತಿಪಾದಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಅಶ್ರಫ್ ಬಾವು ಮಾತನಾಡಿ, ಗಣರಾಜ್ಯದ ಮೌಲ್ಯಗಳನ್ನು ಮತ್ತು ಪ್ರಜಾಪ್ರಭುತ್ವದ ಆಶಯಗಳನ್ನು ತಳಮಟ್ಟದಲ್ಲಿ ಉಳಿಸಿಕೊಳ್ಳುವಲ್ಲಿ ಪ್ರಾದೇಶಿಕ ಸಮಿತಿಗಳ ಪಾತ್ರ ಅತ್ಯಂತ ಪ್ರಮುಖವಾದುದು ಎಂದರು.
ಕಾರ್ಯಕ್ರಮದಲ್ಲಿ ಪುತ್ತೂರು ಕ್ಷೇತ್ರ ಕಾರ್ಯದರ್ಶಿ ಉಸ್ಮಾನ್ ಎ.ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿ ಕಾರ್ಯದರ್ಶಿಆಶ್ರಫ್ ತಲಪಾಡಿ ಪ್ರತಿಜ್ಞಾ ವಿಧಿ ಬೋಧಿಸಿದರು.
ವೇದಿಕೆಯಲ್ಲಿ ಜಿಲ್ಲಾ ಸಮಿತಿ ಸದಸ್ಯ ಅಬೂಬಕ್ಕರ್ ಮದ್ದ, ಪುತ್ತೂರು ನಗರಸಭೆ ಸದಸ್ಯೆ ಝೊಹರಾ ಬನ್ನೂರು, ನಗರ ಸಮಿತಿ ಉಪಾಧ್ಯಕ್ಷ ಶಮೀರ್ ನಾಜೂಕು, ಬನ್ನೂರು ಹನಫೀ ಮಸೀದಿಯ ಧರ್ಮಗುರುಗಳಾದ ಶೇಕ್ ಹಝ್ರತ್ ರಜಬ್ ಸಾಹೇಬ್,ಅಶ್ರಫ್ ಹಾರಾಡಿ (ಕಾರ್ಯದರ್ಶಿ, ಬನ್ನೂರು ಜುಮಾ ಮಸೀದಿ), ನಿಝಾಂ ಹಾರಾಡಿ (ಉಪಾಧ್ಯಕ್ಷರು, ಸಿಲ್-ಸಿಲಾ ವೆಲ್ಫೇರ್ ಅಸೋಸಿಯೇಷನ್), ನಾಸಿರ್ ಈಗಲ್ (ಉಪಾಧ್ಯಕ್ಷರು, ದಖೀರತುಲ್ ಉಖ್ರಾ ಯಂಗ್ಮೆನ್ಸ್ ಅಸೋಸಿಯೇಷನ್), ಫವಾಝ್ ಬನ್ನೂರು (ವಾರ್ಡ್ ಸಮಿತಿ ಅಧ್ಯಕ್ಷರು) ಹಾಗೂ ವಿವಿಧ ಕ್ಷೇತ್ರ ಮತ್ತು ಬ್ಲಾಕ್ ಸಮಿತಿಯ ನಾಯಕರು, ಹಲವಾರು ಕಾರ್ಯಕರ್ತರು ಭಾಗವಹಿಸಿದ್ದರು.
ಎಸ್‌ಡಿಪಿಐ ಪುತ್ತೂರು ನಗರ ಸಮಿತಿ ಕಾರ್ಯದರ್ಶಿ ನಿಷಾದ್ ಡಿ.ಕೆ ಸ್ವಾಗತಿಸಿ, ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಅಬ್ದುಲ್ ರಹೀಂ ಪುತ್ತೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.




