ಮಂಗಳೂರು: ಪಂಪ್ವೆಲ್ ನಲ್ಲಿ ತೆಗೆದಿದ್ದ ಕಲಶ ಪುನರ್ ಸ್ಥಾಪನೆ
ಮಂಗಳೂರು: ರಸ್ತೆ ಅಗಲೀಕರಣ ಹಾಗೂ ಪ್ಲೈಓವರ್ ನಿರ್ಮಾಣಕ್ಕೆ ಪಂಪ್ ವೆಲ್ ನಲ್ಲಿ ತೆಗೆದಿದ್ದ ಕಲಶವನ್ನು ಮತ್ತೆ ಇಂದು ಪುನರಸ್ಥಾಪನೆ ಮಾಡಲಾಗಿದೆ. ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಶನಿವಾರ ಲೋಕಾರ್ಪಣೆಗೊಳಿಸಿದರು.
ಪಂಪ್‌ವೆಲ್‌ನಲ್ಲಿ ವಿಸ್ತಾರವಾದ ವೃತ್ತವನ್ನು ನಿರ್ಮಿಸಿ, ಅದಕ್ಕೆ ಮಹಾವೀರ ವೃತ್ತ ಎಂದು 2003ರಲ್ಲಿ ನಾಮಕರಣ ಮಾಡಲಾಗಿತ್ತು. ಆ ವೃತ್ತದ ಕೇಂದ್ರದಲ್ಲಿ ಕಲಶದ ಆಕೃತಿಯನ್ನು ಸ್ಥಾಪಿಸಲಾಗಿತ್ತು. ಮಂಗಳೂರು ಜೈನ್ ಸೊಸೈಟಿ ಹಾಗೂ ಜೈನ ಸಮುದಾಯದವರು ಅದರ ಉಸ್ತುವಾರಿ ವಹಿಸಿದ್ದರು. ರಾಷ್ಟ್ರೀಯ ಹೆದ್ದಾರಿ 66ರ ಮೇಲ್ಸೇತುವೆಯು ಈ ವೃತ್ತದ ಮೇಲೆಯೇ ಹಾದು ಹೋಗಿದ್ದು, ಅದರ ಕಾಮಗಾರಿ ಸಲುವಾಗಿ 2016ರ ಮಾರ್ಚ್‌ನಲ್ಲಿ ಕಲಶದ ಆಕೃತಿಯನ್ನು ತೆರವುಗೊಳಿಸಲಾಗಿತ್ತು. ಈಗ ಮೇಲ್ಸೇತುವೆ ಪಕ್ಕದಲ್ಲಿ ವೃತ್ತಾಕಾರದ ಪೀಠವನ್ನು ರಚಿಸಿ, ಅದರ ಮೇಳೆ ಕಲಶದ ಆಕೃತಿಯನ್ನು ಮರುಸ್ಥಾಪಿಸಲಾಗಿದೆ.




