ವಿಟ್ಲ: ಕೊಳ್ನಾಡು ಗ್ರಾ.ಪಂ ಮಾಜಿ ಉಪಾಧ್ಯಕ್ಷ ಕುಳಾಲು ವಿಶ್ವನಾಥ ರೈ ನಿಧನ
ವಿಟ್ಲ: ಕುಳಾಲು ಕುಟುಂಬದ ಹಿರಿಯರು, ಶ್ರೀ ವಾರಾಹಿ ಡೈವ ಸೇವಾ ಸಮಿತಿಯ ಗೌರವಾಧ್ಯಕ್ಷರು, ಕೊಳ್ನಾಡು ಗ್ರಾಮ ಪಂಚಾಯತ್‌ನ ಮಾಜಿ ಉಪಾಧ್ಯಕ್ಷರಾದ ಕುಳಾಲು ಶ್ರೀ ವಿಶ್ವನಾಥ ರೈ (93) ಅವರು ನಿಧನರಾಗಿದ್ದಾರೆ.
ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ವಿಶ್ವನಾಥ ರೈ ಅವರು ನಮ್ಮ ಪಾಲಿನ ಮಾರ್ಗದರ್ಶಕರಾಗಿದ್ದರು. ಉತ್ತಮ ಕೃಷಿಕರಾಗಿಯೂ ಗುರುತಿಸಿಕೊಂಡಿದ್ದ ಇವರು ಶೈಕ್ಷಣಿಕ, ಕ್ರೀಡಾ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಜನಾನುರಾಗಿಯಾಗಿದ್ದ ಅವರು, ಗ್ರಾಮೀಣ ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು.
ಸಾರ್ವಜನಿಕ ಬದುಕಿನಲ್ಲಿ ನಿಸ್ವಾರ್ಥ ಸೇವೆಯನ್ನು ಆದರ್ಶವನ್ನಾಗಿ ಮಾಡಿಕೊಂಡಿದ್ದ ಅವರು, ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾಗಿ ಜನಸಾಮಾನ್ಯರ ವಿಶ್ವಾಸ ಗಳಿಸಿದ್ದರು. ಸಹಕಾರ ಮನೋಭಾವ, ಸ್ಪಷ್ಟ ನಿಲುವು ಮತ್ತು ಮೃದು ಸ್ವಭಾವದಿಂದ ಎಲ್ಲ ವರ್ಗದ ಜನರ ಗೌರವಕ್ಕೆ ಪಾತ್ರರಾಗಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಒರ್ವ ಪುತ್ರಿಯನ್ನು ಒಳಗೊಂಡ ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಮಧ್ಯಾಹ್ನ 12 ಗಂಟೆಗೆ ಕುಳಾಲು ನಿವಾಸದಲ್ಲಿ ನಡೆಯಲಿದೆ. ಮೃತಾತ್ಮಕ್ಕೆ ಚಿರಶಾಂತಿ ಕೋರಿ ನಾವೆಲ್ಲರೂ ಪ್ರಾರ್ಥಿಸೋಣ.




