ಬೆಳ್ತಂಗಡಿ: ಬಾಲಕ ಸುಮಂತ್ ನಿಗೂಢ ಸಾವು ಪ್ರಕರಣ: ಪೋಸ್ಟ್ ಮಾರ್ಟಂ ವರದಿಯಲ್ಲಿ ಸ್ಪೋಟಕ ಮಾಹಿತಿ ಲಭ್ಯ
ಬೆಳ್ತಂಗಡಿ: ಗೇರುಕಟ್ಟೆ ಸಮೀಪದ ಓಡಿಲ್ನಾಳ ಗ್ರಾಮದಲ್ಲಿ ನಡೆದ ಬಾಲಕ ಸುಮಂತ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಸ್ಟ್ ಮಾರ್ಟ್ ವರದಿಯಲ್ಲಿ ಸ್ಪೋಟಕ ಮಾಹಿತಿ ಪೊಲೀಸರಿಗೆ ದೊರೆತಿದ್ದು, ಬಾಲಕ ಕೆರೆಯಲ್ಲಿ ಮುಳುಗುವ ಮೊದಲು ಜೀವಂತ ಇದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಜನವರಿ 12 ರಂದು ಬೆಳಗ್ಗೆ ಧನುಪೂಜೆಗೆಂದು ಸುಮಂತ್ ಬೆಳಗ್ಗೆ 5 ಗಂಟೆಗೆ ಎದ್ದು ದೇವಸ್ಥಾನಕ್ಕೆ ಹೊರಟಿದ್ದ. ವಾರದಲ್ಲೊಮ್ಮೆ ಪೂಜೆಗೆ ತೆರಳುವ ವಾಡಿಕೆ ಮಾಡಿಕೊಂಡಿದ್ದ. ಆದರೆ ನಿನ್ನೆ ಬೆಳಗ್ಗೆ ದೇವಸ್ಥಾನಕ್ಕೆ ಹೋದವನು ಮರಳಿ ಮನೆಗೆ ಬಂದಿರಲಿಲ್ಲ. ಮನೆಯವರು ಬಳಿಕ ಹುಡುಕಾಟ ನಡೆಸಿದಾಗ ಮನೆಯಿಂದ 500 ಮೀಟರ್ ದೂರದ ಬಾವಿಯಲ್ಲಿ ಶವ ಪತ್ತೆಯಾಗಿದೆ. ಶವವನ್ನು ಬಾವಿಯಿಂದ ಮೇಲೆತ್ತಿದಾಗ ತಲೆಯಲ್ಲಿ ಗಾಯದ ಗುರುತುಗಳಿದ್ದವು. ಹೀಗಾಗಿ ಏನೋ ಅಸಹಜ ಆಗಿರಬೇಕೆಂಬ ಶಂಕೆ ವ್ಯಕ್ತವಾಗಿತ್ತು.
ಇದೀಗ ಶವದ ಪೋಸ್ಟ್ ಮಾರ್ಟಮ್ ಪರೀಕ್ಷೆಯ ಪ್ರಾಥಮಿಕ ವರದಿಯ ಪ್ರಕಾರ, ಬಾಲಕ ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತನಾಗಿದ್ದ ಎಂಬ ಮಾಹಿತಿ ಇದೆ. ಅಲ್ಲದೆ, ನೀರಿನಲ್ಲಿ ಮುಳುಗಿದ್ದೇ ತಕ್ಷಣದ ಸಾವಿಗೆ ಕಾರಣವಾಗಿರುತ್ತದೆ ಎಂದು ತಿಳಿಸಿದೆ. ತಲೆಯ ಮೇಲಿರುವ ಗಾಯಗಳು ಮಂದ ಬಲದ ಗಾಯವಾಗಿದ್ದು ಮತ್ತು ಯಾವುದೇ ಚೂಪಾದ ಆಯುಧಗಳಿಂದ ಅಥವಾ ಬಾವಿ ಒಳಗಡೆ ಬಿದ್ದ ಸಂದರ್ಭದಲ್ಲಿ ಆಗಿರುವ ಗಾಯಗಳಲ್ಲ ಎಂಬ ನೆಲೆಯಲ್ಲಿ ಪ್ರಾಥಮಿಕ ಮಾಹಿತಿಗಳಿವೆ.




