ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಕೇಸ್ ವಜಾಗೊಳಿಸಿದ ಹೈಕೋರ್ಟ್
ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ಬೆಳ್ತಂಗಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ರಂಜನ್ ರಾವ್ ಯರ್ಡೂರು ದಾಖಲಿಸಿದ್ದ ಕ್ರಿಮಿನಲ್ ಕೇಸನ್ನು ಹೈಕೋರ್ಟ್ ವಜಾಗೊಳಿಸಿ ತೀರ್ಪು ನೀಡಿದೆ.
2016ನೇ ಇಸವಿಯಲ್ಲಿ ರಂಜನ್ ರಾವ್ ಯರ್ಡೂರು ಅವರು ಬೆಳ್ತಂಗಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಿದ್ದರು. ಗ್ರಾಮಾಭಿವೃದ್ಧಿ ಯೋಜನೆಗೆ ಹಣಕಾಸು ವ್ಯವಹಾರ ನಡೆಸಲು ಅನುಮತಿ ಇಲ್ಲ. ಅಕ್ರಮವಾಗಿ ಬಡ್ಡಿಗೆ ಹಣ ನೀಡಲಾಗುತ್ತಿದೆ. ನಿಯಮ ಉಲ್ಲಂಘಿಸಿ ಜಾಸ್ತಿ ಬಡ್ಡಿ ವಿಧಿಸಲಾಗುತ್ತಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತನ್ನ ದೂರಿನಲ್ಲಿ ಮನವಿ ಮಾಡಿದ್ದ ರಂಜನ್ ರಾವ್ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯಸ್ಥರೂ ಆಗಿರುವ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮತ್ತಿತರರನ್ನು ಪ್ರತಿವಾದಿಯನ್ನಾಗಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ಬೆಳ್ತಂಗಡಿ ನ್ಯಾಯಾಲಯ ಪೊಲೀಸ್ ತನಿಖೆಗೆ ಆದೇಶ ನೀಡಿತ್ತು. ಇದನ್ನು ಪ್ರಶ್ನಿಸಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಪ್ರಸಿದ್ದ ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆ ಅವರ ಮೂಲಕ ಹೈಕೋರ್ಟ್ ಮೆಟ್ಟಿಲೇರಿದ್ದರು. ನಂತರ ಪೊಲೀಸ್ ತನಿಖೆಗೆ ಆದೇಶಿಸಿದ್ದ ಬೆಳ್ತಂಗಡಿ ನ್ಯಾಯಾಲಯದ ಆದೇಶಕ್ಕೆ ಹೈಕೋರ್ಟ್ ತಡೆ ನೀಡಿತ್ತು. ಆನಂತರ ವಾದ ಪ್ರತಿವಾದ ಮುಂದುವರಿದಿತ್ತು.




