ಸಾಮಾಜಿಕ ಜಾಲತಾಣದಲ್ಲಿ ಯುವತಿಗೆ ಮೆಸೇಜ್: ಇನ್ಸ್ಟಾಗ್ರಾಂ-ಫೇಸ್‌ಬುಕ್ ಹ್ಯಾಕ್ ಆಗಿದೆ ಎಂದ ಜಯನಗರ ಬಿಜೆಪಿ ಶಾಸಕ
ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಸಿ.ಕೆ.ರಾಮಮೂರ್ತಿ ಅವರ ಫೇಸ್‍ಬುಕ್, ಇನ್‍ಸ್ಟಾಗ್ರಾಂ ಖಾತೆಯಿಂದ ಯುವತಿಯೊಬ್ಬರಿಗೆ ಸಂದೇಶ ಕಳುಹಿಸಿರುವ ಆರೋಪದಡಿ ಬೆಂಗಳೂರು ದಕ್ಷಿಣ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.
ಈ ಬೆಳವಣಿಗೆಯಿಂದ ಎಚ್ಚೆತ್ತಿರುವ ಶಾಸಕರು, ತಮ್ಮ ಅಧಿಕೃತ ಖಾತೆಯನ್ನು ಯಾರೋ ಹ್ಯಾಕ್ ಮಾಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಶಾಸಕರ ಅಧಿಕೃತ ಇನ್ಸ್ಟಾ ಪೇಜ್‌ನಿಂದ ಯುವತಿಗೆ ಹಾಯ್, ಹಲೋ ಗುಡ್ ಮಾರ್ನಿಂಗ್, ಗುಡ್ ಈವ್ನಿಂಗ್, ರೀಲ್ಸ್ ಸೂಪರ್ ಅಂತಾ ಸಂದೇಶ ರವಾನಿಸಲಾಗಿದೆ. ಸದ್ಯ ಈ ಸಂದೇಶ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಹಿನ್ನೆಲೆ ಶಾಸಕ ಸಿ.ಕೆ ರಾಮಮೂರ್ತಿ ಸೈಬರ್ ಕ್ರೈಂಗೆ ದೂರು ನೀಡಿ ಹ್ಯಾಕರ್ಸ್ ಹಾಗೂ ನಕಲಿ ಖಾತೆ ಸೃಷ್ಟಿಸಿದವರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚಿಸಿದ್ದಾರೆ.




