ಬೆಳ್ತಂಗಡಿ: ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ಯತ್ನ: ಕೋಟೆಕಾರ್ ನಿವಾಸಿ ಉಮರ್ ಶರೀಫ್ ಬಂಧನ
ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣೆಯ ಪಿ.ಎಸ್.ಐ ಆನಂದ ಎಂ. ರವರು ಸಿಬ್ಬಂದಿಗಳೊಂದಿಗೆ ದಿನಾಂಕ 03-01-2026 ರಂದು ಸಂಜೆ 4.00 ಗಂಟೆಯಿಂದ ರೌಂಡ್ಸ್ ಕರ್ತವ್ಯದಲ್ಲಿದ್ದ ವೇಳೆ, ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಮದ್ದಡ್ಕ ಪೇಟೆಯ ಎಂ.ಎ. ಕಾಂಪ್ಲೇಕ್ಸ್ ಸಮೀಪ ಸಾರ್ವಜನಿಕ ರಸ್ತೆ ಬದಿಯಲ್ಲಿ ಬಿಳಿ ಬಣ್ಣದ ಕಾರಿನಲ್ಲಿ ಅನುಮಾನಾಸ್ಪದವಾಗಿ ಕುಳಿತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ವಿಚಾರಣೆಯಲ್ಲಿ ಆರೋಪಿತನು ದೇರಳಕಟ್ಟೆ, ಮಂಗಳೂರು ಕೋಟೆಕಾರ್ ನಿವಾಸಿ ಉಮ್ಮರ್ ಶರೀಪ್ (42) ಎಂದು ಗುರುತಿಸಲ್ಪಟ್ಟಿದ್ದು, ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟಕ್ಕೆ ತಂದಿರುವುದಾಗಿ ಒಪ್ಪಿಕೊಂಡಿರುತ್ತಾನೆ.
ಅಂಗಶೋಧನೆಯಲ್ಲಿ 4 ಸಿಗರೇಟ್ ಪ್ಯಾಕೆಟ್‌ಗಳೊಳಗೆ ಇರಿಸಲಾದ 8 ಪ್ಲಾಸ್ಟಿಕ್ ಕವರ್‌ಗಳಲ್ಲಿ ಒಟ್ಟು 55.48 ಗ್ರಾಂ ತೂಕದ ಎಂಡಿಎಂಎ ಪತ್ತೆಯಾಗಿದ್ದು, ಇದರ ಅಂದಾಜು ಮೌಲ್ಯ ರೂ.5,54,800/- ಆಗಿರುತ್ತದೆ.
ವಿಚಾರಣೆಯಲ್ಲಿ ಸದ್ರಿ ಮಾದಕ ವಸ್ತುವನ್ನು ಸುನ್ನತ್ ಕೆರೆ ನಿವಾಸಿ ನೌಷಾದ್ ಎಂಬಾತ ನೀಡಿರುವುದಾಗಿ ಆರೋಪಿತನು ತಿಳಿಸಿರುತ್ತಾನೆ. ಅಲ್ಲದೆ, ಮಾದಕ ವಸ್ತು ಸಾಗಾಟ ಹಾಗೂ ಮಾರಾಟಕ್ಕೆ ಬಳಸಿದ ಕೆಎ-19 ಎಂಜಿ-4669 ಕಾರನ್ನು ವಶಕ್ಕೆ ಪಡೆಯಲಾಗಿದ್ದು, ಅದರ ಅಂದಾಜು ಮೌಲ್ಯ ರೂ.6 ಲಕ್ಷ ಆಗಿರುತ್ತದೆ.
ಈ ಸಂಬಂಧ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 01/2026 ಕಲಂ 8(c), 22(c) NDPS ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗುತ್ತಿದೆ.




