ಉಡುಪಿ: ರಿಟ್ಜ್ ಕಾರು, ಅಯ್ಯಪ್ಪ ಭಕ್ತರಿದ್ದ ವ್ಯಾನ್ ನಡುವೆ ರಸ್ತೆ ಅಪಘಾತ: ಕಾರಿನಲ್ಲಿದ್ದ ಚಾಲಕನಿಗೆ ಗಾಯ
ಉಡುಪಿ: ರಿಟ್ಜ್ ಕಾರು ಮತ್ತು ಅಯ್ಯಪ್ಪ ಭಕ್ತರಿದ್ದ ವ್ಯಾನ್ ನಡುವೆ ಭೀಕರ ರಸ್ತೆ ಅಪಘಾತ ಪರ್ಕಳದ ಕೆನರಾ ಬ್ಯಾಂಕ್ ತಿರುವಿನ ಬಳಿ ನಡೆದಿದೆ. ಅಪಘಾತದಲ್ಲಿ ಕಾರಿನಲ್ಲಿದ್ದ ಚಾಲಕನಿಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಜು ಮುಸುಕಿದ ವಾತಾವರಣದ ಹಿನ್ನೆಲೆಯಲ್ಲಿ ಪರ್ಕಳದ ಕೆನರಾ ಬ್ಯಾಂಕ್ ತಿರುವಿನ ಬಳಿ ರಸ್ತೆ ಅಪಘಾತ ಸಂಭವಿಸಿದೆ. ಹಿರಿಯಡ್ಕದಿಂದ ಉಡುಪಿಯತ್ತ ಪ್ರಯಾಣಿಸುತ್ತಿದ್ದ ರಿಡ್ಸ್ ಕಾರು ಚಾಲಕನ ನಿಯಂತ್ರಣ ತಪ್ಪಿ, ಕೆಳಪರ್ಕಳ ತಿರುವಿನಲ್ಲಿ ಎದುರಿನಿಂದ ಬರುತ್ತಿದ್ದ ಅಯ್ಯಪ್ಪ ವ್ರತಧಾರಿಗಳ ವ್ಯಾನ್‌ಗೆ ಡಿಕ್ಕಿ ಹೊಡೆದಿದೆ.
ತೆಲಂಗಾಣ ಮೂಲದ ಅಯ್ಯಪ್ಪ ವ್ರತಧಾರಿಗಳು ಉಡುಪಿಯಿಂದ ಧರ್ಮಸ್ಥಳದತ್ತ ಸಂಚರಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಅಪಘಾತದಲ್ಲಿ ರಿಡ್ಸ್ ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಕಾರಿನಲ್ಲಿದ್ದ ಚಾಲಕನಿಗೆ ಗಾಯಗಳಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯ ಅಯ್ಯಪ್ಪ ವ್ರತಧಾರಿಗಳು ಹಾಗೂ ಸಾರ್ವಜನಿಕರು ಮಣಿಪಾಲ ಪೊಲೀಸರೊಂದಿಗೆ ಸೇರಿ ವಾಹನಗಳನ್ನು ರಸ್ತೆ ಬದಿಗೆ ಸರಿಸಲು ಸಹಕರಿಸಿದರು. ಅಪಘಾತದ ಕುರಿತು ಮಣಿಪಾಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.




