ಕಂಕನಾಡಿ: ಶ್ರೀ ಬ್ರಹ್ಮ ಬೈದರ್ಕಳ ಕ್ಷೇತ್ರದಲ್ಲೂ ಸಾಂಪ್ರದಾಯಿಕ ಕೋಳಿ ಅಂಕಕ್ಕೆ ಪೊಲೀಸರಿಂದ ತಡೆ
ಮಂಗಳೂರು: ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಿಗೆ ಇದೀಗ ಪೊಲೀಸರು ತಡೆಯೊಡ್ಡುತ್ತಿದ್ದಾರೆ. ಕಾನೂನಿನ ನೆಪವೊಡ್ಡಿ ಸಾಂಪ್ರದಾಯಿಕ ಆಚರಣೆ ನಡೆಸದಂತೆ ತಾಕೀತು ಮಾಡಲಾಗಿದೆ.
ಎಂತಹ ಕಠಿಣ ಸಂದರ್ಭದಲ್ಲೂ ನಿಲ್ಲದ ಮಂಗಳೂರಿನ ಕಂಕನಾಡಿ ಗರೋಡಿ ಜಾತ್ರೆಯ ಕೋಳಿ ಅಂಕಕ್ಕೆ ಈ ಬಾರಿ ಸಂಕಷ್ಟ ಎದುರಾಗಿದೆ. ಹೀಗಾಗಿ, ಅತ್ತ ಭಕ್ತರು, ಇತ್ತ ದೈವಸ್ಥಾನದ ಆಡಳಿತ ಸಮಿತಿ ದೈವದ ಮೊರೆ ಹೋಗಿದೆ.
ಇತ್ತೀಚೆಗಷ್ಟೇ ವಿಟ್ಲದ ಕಜಂಬುಶ್ರೀ ಉಳ್ಲಾಲ್ತಿ ದೇವಸ್ಥಾನದ ಜಾತ್ರೋತ್ಸವದಲ್ಲಿ ಕೋಳಿ ಅಂಕಕ್ಕೆ ತಡೆಯೊಡ್ಡಲಾಗಿದ್ದು ಭಾರೀ ಸುದ್ದಿಯಾಗಿತ್ತು. ಪುತ್ತೂರು ಕಾಂಗ್ರೆಸ್ ಶಾಸಕ ಅಶೋಕ್ ರೈ ಆಗಮಿಸಿ ಕೋಳಿ ಅಂಕ ನಡೆಸುವಂತೆ ಮಾಡಿದ್ದು ವಿವಾದಕ್ಕೂ ಕಾರಣವಾಗಿತ್ತು.
ಬಿಜೆಪಿ ಮುಖಂಡರೂ ತೆರಳಿ ಅಂಕ ನಡೆಸುವಂತೆ ಒತ್ತಡ ಹಾಕಿದ್ರು. ಈ ನಡುವೆ ಕಾಂಗ್ರೆಸ್ ಶಾಸಕ, ಬಿಜೆಪಿ ಮುಖಂಡರು ಸೇರಿದಂತೆ ಹಲವರ ಮೇಲೆ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ಇದೀಗ ಅಂತಹದ್ದೇ ಪರಿಸ್ಥಿತಿ ಮಂಗಳೂರು ನಗರದ ಕಂಕನಾಡಿಯ ಗರೋಡಿಯಲ್ಲೂ ಎದುರಾಗಿದೆ. ಕಾನೂನಿನ ನೆಪವೊಡ್ಡಿ ಕಂಕನಾಡಿ ಶ್ರೀಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರದ ಕೋಳಿ ಅಂಕಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ.
ಕರಾವಳಿ ಭಾಗದಲ್ಲಿ ಕೋಳಿ ಅಂಕಕ್ಕೆ ಭಾರೀ ಮಹತ್ವವಿದೆ. ಧಾರ್ಮಿಕ ಜಾತ್ರಾ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಕೋಳಿ ಅಂಕವನ್ನು ಸಾಂಪ್ರದಾಯಿಕವಾಗಿ ನಡೆಸಲಾಗುತ್ತದೆ. ಅದರಲ್ಲೂ ಮಂಗಳೂರು ನಗರದ ಕಂಕನಾಡಿಯ ಶ್ರೀಬ್ರಹ್ಮ ಬೈದರ್ಕಳ ಗರೋಡೆ ಜಾತ್ರೆಯ ಕೋಳಿ ಅಂಕಕ್ಕೆ ವಿಶೇಷ ಮಹತ್ವವಿದೆ. ಇಲ್ಲಿ ನಡೆಯುವ ಕೋಳಿ ಅಂಕದಲ್ಲಿ ಪಾಲ್ಗೊಳ್ಳಲೆಂದೇ ಅದೆಷ್ಟೋ ಭಕ್ತರು ಹರಕೆ ಹೊತ್ತಿರುತ್ತಾರೆ. ಈ ಮಣ್ಣಿಗೆ ತಂದು ತಾವು ಸಾಕಿದ ಕೋಳಿಯ ಒಂದು ಹನಿ ರಕ್ತ ಭೂಮಿಗೆ ಬಿದ್ದರೂ, ತಮ್ಮ ಕಷ್ಟ ಪರಿಹಾರವಾಗುತ್ತದೆ ಅನ್ನೋ ನಂಬಿಕೆ ಜನರಲ್ಲಿದೆ. ಹೀಗೆ, ಕಳೆದ 154 ವರ್ಷಗಳಿಂದ ನಡೆದುಕೊಂಡು ಬಂದ ಸಂಪ್ರದಾಯಕ್ಕೆ ಈ ಬಾರಿ ಪೊಲೀಸ್ ಇಲಾಖೆ ಅನುಮತಿ ನಿರಾಕರಿಸಿದೆ. ಇದರಿಂದಾಗಿ ಭಕ್ತರು ಕೂಡ ಆತಂಕಕ್ಕೊಳಗಾಗಿದ್ದಾರೆ.




