ಕುಳಾಲು ಸರಕಾರಿ ಶಾಲಾ ನೂತನ ತರಗತಿ ಉದ್ಘಾಟನೆ ಮತ್ತು ಶಾಲಾ ವಾರ್ಷಿಕೋತ್ಸವ: ಶತಮಾನದ ಹೊಸ್ತಿಲಲ್ಲಿರುವ ಕುಳಾಲು ಸರ್ಕಾರಿ ಶಾಲೆಯ ಗತವೈಭವ ಮರುಕಳಿಕೆ: ಸುಭಾಶ್ಚಂದ್ರ ಶೆಟ್ಟಿ ಕುಳಾಲು
ವಿಟ್ಲ: ಕೊಳ್ನಾಡು ಗ್ರಾಮದ ಕುಳಾಲು ದ.ಕ. ಜಿಲ್ಲಾ ಪಂಚಾಯಿತಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನ ಕೊಠಡಿ ಉದ್ಘಾಟನಾ ಸಮಾರಂಭ ಮತ್ತು ಶಾಲಾ ವಾರ್ಷಿಕೋತ್ಸವ ನಡೆಯಿತು.

ಗ್ರಾಮ ಸ್ವರಾಜ್ ಪ್ರತಿಷ್ಠಾನದ ಅಧ್ಯಕ್ಷ, ಶಾಲೆಯ ಹಿರಿಯ ವಿದ್ಯಾರ್ಥಿ ಆದ ಕುಳಾಲು ಸುಭಾಶ್ಚಂದ್ರ ಶೆಟ್ಟಿ ಅವರು ಮಾತನಾಡಿದ ಅವರು, ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿಯವರ ಶಿಫಾರಸ್ಸಿನ ಮೇರೆಗೆ, ತಮ್ಮ ಮುತುವರ್ಜಿಯಿಂದ ಹಾಗೂ ಎಂ ಆರ್ ಪಿ ಎಲ್, ಸಿಎಸ್ ಆರ್ ನಿಧಿಯಡಿ ಕೃಷ್ಣ ಹೆಗ್ಡೆಯವರ ಸಹಕಾರದೊಂದಿಗೆ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣಗೊಂಡಿದೆ ಎಂದು ವಿವರಿಸಿದರು.
ಐದು–ಆರು ವರ್ಷಗಳ ಹಿಂದೆ ಖಾಸಗಿ ಶಾಲೆಗಳ ಪ್ರಭಾವದಿಂದ ಮುಚ್ಚುವ ಹಂತಕ್ಕೆ ತಲುಪಿದ್ದ ಈ ಸರ್ಕಾರಿ ಶಾಲೆಯನ್ನು ಉಳಿಸಲು ಹಳೆ ವಿದ್ಯಾರ್ಥಿಗಳು, ಊರ ನಾಗರಿಕರು, ಸ್ನೇಹಿತರು ಹಾಗೂ ವಿದ್ಯಾಭಿಮಾನಿಗಳು ಒಂದಾಗಿ ಶ್ರಮಿಸಿದ್ದಾರೆ. ನಿಂತು ಹೋಗಿದ್ದ ಶಾಲಾ ವಾರ್ಷಿಕೋತ್ಸವವನ್ನು ಪುನರಾರಂಭಿಸುವುದರೊಂದಿಗೆ, ಮೂಲಭೂತ ಸೌಕರ್ಯ, ಸುಸಜ್ಜಿತ ಕಟ್ಟಡ, ಶಾಲಾ ಬಸ್ ವ್ಯವಸ್ಥೆ ಸೇರಿದಂತೆ ಖಾಸಗಿ ಶಾಲೆಗೆ ಸಮಾನವಾದ ಸೌಲಭ್ಯಗಳನ್ನು ಸರ್ಕಾರಿ ಶಾಲೆಯಲ್ಲೇ ಕಲ್ಪಿಸಲಾಗಿದೆ. ಇಂದು ಸರ್ಕಾರಿ ಶಾಲೆ ಹೇಗಿರಬೇಕೆಂಬ ಕನಸು ನನಸಾಗಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು.
1930ರಲ್ಲಿ ಈ ಶಾಲೆಯನ್ನು ಸ್ಥಾಪಿಸಲು ಕಾರಣಕರ್ತರಾದ ಸ್ವಾತಂತ್ರ್ಯ ಹೋರಾಟಗಾರ ಕುಳಾಲು ಮನೆತನದ ಅಣ್ಣಪ್ಪ ಭಂಡಾರಿಯವರ ಅಕ್ಷಯ ಶ್ರಮವನ್ನು ಅವರು ಸ್ಮರಿಸಿದರು.
ಸ್ವಾತಂತ್ರ್ಯ ಹೋರಾಟದ ಜತೆಗೆ ಶಿಕ್ಷಣದ ಮಹತ್ವವನ್ನು ಅರಿತು, ಗ್ರಾಮಕ್ಕೆ ವಿದ್ಯೆಯ ಬೆಳಕು ನೀಡಿದ ಮಹನೀಯರಲ್ಲಿ ಅಣ್ಣಪ್ಪ ಭಂಡಾರಿಯವರು ಪ್ರಮುಖರು ಎಂದು ಹೇಳಿದರು.
ಈ ಶಾಲೆ 2030ರಲ್ಲಿ ಶತಮಾನೋತ್ಸವವನ್ನು ಆಚರಿಸಲಿದೆ ಎಂಬ ಸಂಗತಿಯನ್ನು ಅವರು ಹೆಮ್ಮೆಯಿಂದ ತಿಳಿಸಿದರು.
ಕಟ್ಟಡ ನಿರ್ಮಾಣಕ್ಕೆ ನೆರವು ಕೋರಿದಾಗ ಸಂಘ ಸಂಸ್ಥೆಗಳು ಸ್ಪಂದಿಸಿದ ಘಟನೆಯನ್ನು ಸ್ಮರಿಸಿದ ಸುಭಾಶ್ಚಂದ್ರ ಶೆಟ್ಟಿ, ಪತ್ರಕರ್ತ ವಿ.ಟಿ. ಪ್ರಸಾದ್ ಅವರ ಸಹೋದರರಾಗಿರುವ ಕರ್ನಾಟಕ ಬ್ಯಾಂಕ್‌ನ ಉನ್ನತ ಅಧಿಕಾರಿಯವರು, ತಾವು ಕಲಿತ ಶಾಲೆಯಲ್ಲದಿದ್ದರೂ ತಮ್ಮ ಗ್ರಾಮದ ಶಾಲೆ ಎಂಬ ನೆಲೆಯಲ್ಲಿ ನನ್ನ ಕೋರಿಗೆ ಸ್ಪಂದಿಸಿ ಶಾಲಾ ಬಸ್ ವ್ಯವಸ್ಥೆಗೆ ಸಹಕರಿಸಿದುದನ್ನು ಪ್ರಶಂಸಿಸಿದರು.
ಅಲ್ಲದೆ ಅನಿವಾಸಿ ಭಾರತೀಯರು ಸೇರಿದಂತೆ ಹಳೆ ವಿದ್ಯಾರ್ಥಿಗಳು, ವಿದ್ಯಾಭಿಮಾನಿಗಳು ಹಾಗೂ ಊರ ನಾಗರಿಕರು ನೀಡಿದ ಸಮಗ್ರ ಸಹಕಾರದಿಂದ ಶಾಲೆಯ ಗತವೈಭವ ಮರುಕಳಿಸಲು ಸಾಧ್ಯವಾಗಿದೆ ಎಂದು ತಿಳಿಸಿ, ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಹಳೆವಿದ್ಯಾರ್ಥಿ ನಿವೃತ್ತ ಬ್ಯಾಂಕ್ ಉದ್ಯೋಗಿ ಗಿರೀಶ್ ಭಂಡಾರಿ, ನಿವೃತ್ತ ಶಿಕ್ಷಕ ರಾಧಾಕೃಷ್ಣ ರೈ,ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಸೈನಾರ್ ತಾಳಿತ್ತನೂಜಿ, ಸ್ಥಳೀಯ ಹಿರಿಯರಾದ ಅಬೂಬಕ್ಕರ್ ಕುಳಾಲು ಇವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
ಅಲ್ಲದೆ ಸಮಾರೋಪ ಸಮಾರಂಭದಲ್ಲಿ ಶಾಲೆಯ ಎಳಿಗೆಗಾಗಿ ಶ್ರಮಿಸಿದ ಹಳೆವಿದ್ಯಾರ್ಥಿಗನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಸುಸಜ್ಜಿತ ನೂತನ ಕಟ್ಟಡವನ್ನು ಕೊಳ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಅಶ್ರಪ್ ಕೆ.ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷರಾದ ಶರೀಪ್ ಕೆ.ಎಚ್, ಉಪಾದ್ಯಕ್ಷರಾದ ರಮೇಶ್ ಕಾಮತ್, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷರಾದ ಎಂ.ಎಸ್.ಮಹಮ್ಮದ್, ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಕೆ.ಎ.ಅಸ್ಮ ಹಸೈನಾರ್ ತಾಳಿತ್ತನೂಜಿ, ಕೊಳ್ನಾಡು ಗ್ರಾಮ ಪಂಚಾಯಿತಿ ಸದಸ್ಯರಾದ ರತ್ನಾ, ಸಂಜೀವಿ, ಭಾಗೀರಥಿ ಸೇರಿದಂತೆ ಆರೋಗ್ಯ ಇಲಾಖೆಯ ವಿನ್ಸೆಂಟ್ ಉಪಸ್ಥಿತಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ತಿಮ್ಮು ಸ್ವಾಗತಿಸಿ, ಸಹ ಶಿಕ್ಷಕ ಹೇಮ ಎಂ.ಟಿ.ಧನ್ಯವಾದ ತಿಳಿಸಿದರು.




