ಮಂಗಳೂರು: ಹಟ್ಟಿಯಿಂದ ದನದ ಕರುವನ್ನು ಎಳೆದೊಯ್ದ ಚಿರತೆ
ಬಜಪೆ: ಮಂಗಳೂರು ತಾಲೂಕಿನ ಎಡಪದವು ಸಮೀಪದ ಒಡ್ಡೂರು ಕಾಂತುಕೋಡಿಯ ನವೀನ್ ನಾಯಕ್ ಅವರ ಹಟ್ಟಿಯಿಂದ ದನದ ಕರುವೊಂದನ್ನು ಚಿರತೆ ಎಳೆದೊಯ್ದು ಅರ್ಧ ತಿಂದು ಪರಾರಿಯಾದ ಘಟನೆ ಬುಧವಾರ ರಾತ್ರಿ ಸಂಭವಿಸಿದೆ.
ತಡರಾತ್ರಿ ಹಟ್ಟಿಗೆ ನುಗ್ಗಿದ ಚಿರತೆ ಕಟ್ಟಿ ಹಾಕಿದ್ದ ದನದ ಕರುವಿನ ಮೇಲೆರಗಿ 100 ಮೀಟರ್‌ಗಳಷ್ಟು ದೂರ ಎಳೆದುಕೊಂಡು ಹೋಗಿ ದೇಹದ ಅರ್ಧ ಭಾಗವನ್ನು ತಿಂದು ತೆರಳಿದೆ. ಮನೆಯವರು ಬೆಳಗ್ಗೆ ಕೊಟ್ಟಿಗೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.
ಒಡ್ಡೂರು ಪರಿಸರದ ಮನೆಯೊಂದರ ಅಂಗಳದಲ್ಲಿ ಕಟ್ಟಿ ಹಾಕಿದ್ದ ಕೋಳಿಯೊಂದನ್ನು ಕಳೆದ ತಿಂಗಳು ಚಿರತೆ ಎಗರಿಸಿ ಪರಾರಿಯಾಗಿತ್ತು. ಕೆಲವು ದಿನಗಳ ಹಿಂದೆ ನಾಯಿಯೊಂದನ್ನು ಕಚ್ಚಿಕೊಂಡು ಹೋಗಿತ್ತು. ಈ ಬಾರಿ ಕೊಟ್ಟಿಗೆಗೆ ನುಗ್ಗಿ ಕರುವನ್ನೇ ಎಳೆದುಕೊಂಡು ಹೋಗಿರುವು ಪರಿಸರದಲ್ಲಿ ಆತಂಕಕ್ಕೆ ಕಾರಣವಾಗಿದೆ. ಚಿರತೆಯನ್ನು ಸೆರೆ ಹಿಡಿಯಲು ಬೋನು ಇಡುವುದಾಗಿ ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.




