February 4, 2026

ಅಬ್ದುಲ್‌ ನಾಸೀರ್‌ ಮದನಿ ವಿರುದ್ಧ ಸಾಕ್ಷ್ಯ ಹೇಳದಂತೆ ಬೆದರಿಕೆಯೊಡ್ಡಿದ್ದ ಪ್ರಕರಣ:
ಪತ್ರಕರ್ತೆ ಕೆ. ಕೆ. ಶಹೀನಾ ಮತ್ತಿತರ ಮೂವರನ್ನು ಪ್ರಕರಣದಿಂದ ಕೈಬಿಡಲು ಹೈಕೋರ್ಟ್‌ ನಿರಾಕರಣೆ

0
Abdu_Nasser_Mahdany.jpg

ಬೆಂಗಳೂರು: ಸರಣಿ ಬಾಂಬ್‌ ಸ್ಫೋಟದ ಆರೋಪದಲ್ಲಿರುವ ಅಬ್ದುಲ್‌ ನಾಸೀರ್‌ ಮದನಿ ವಿರುದ್ಧ ಸಾಕ್ಷ್ಯ ಹೇಳದಂತೆ ಬೆದರಿಕೆಯೊಡ್ಡಿದ್ದ ಆರೋಪದ ಮೇಲೆ ಕೇರಳದ ಪತ್ರಕರ್ತೆ ಕೆ. ಕೆ. ಶಹೀನಾ ಮತ್ತಿತರ ಮೂವರನ್ನು ಪ್ರಕರಣದಿಂದ ಕೈಬಿಡಲು ಹೈಕೋರ್ಟ್‌ ನಿರಾಕರಿಸಿದೆ.

ಮಡಿಕೇರಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2018ರ ಫೆಬ್ರುವರಿ 28 ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಕೆ. ಕೆ. ಶಹೀನಾ, ಸುಬೇರ ಪಡುಪು ಮತ್ತು ಉಮರ್‌ ಮೌಲ್ವಿ ಸಲ್ಲಿಸಿದ್ದ ಕ್ರಿಮಿನಲ್‌ ರಿವಿಷನ್‌ ಅರ್ಜಿಯನ್ನು ಆಲಿಸಿದ ನ್ಯಾ. ಎನ್‌. ಕೆ. ಸುದೀಂಧ್ರ ರಾವ್‌ ಅವರಿದ್ದ ಏಕಸದಸ್ಯ ಪೀಠ ಇತ್ತೀಚೆಗೆ ಈ ತೀರ್ಪು ನೀಡಿದೆ.

ಮದನಿ ಜೈಲಿನಿಂದ ಆಸ್ಪತ್ರೆಗೆ:
ಅರ್ಜಿಯಲ್ಲಿ ಯಾವುದೇ ಮೆರಿಟ್‌ ಇಲ್ಲ, ಅರ್ಜಿದಾರರು ತಾವು ಎತ್ತಿರುವ ಅಂಶಗಳಿಗೆ ಸೂಕ್ತ ಪುರಾವೆಯನ್ನು ಒದಗಿಸಿಲ್ಲ. ಅಲ್ಲದೆ, ಅರ್ಜಿದಾರರು ತಾವು ನಿರಪರಾಧಿಗಳೆಂದು ಸಾಬೀತುಪಡಿಸಲು ವಿಚಾರಣಾ ನ್ಯಾಯಾಲಯದಲ್ಲಿ ಅವಕಾಶವಿದ್ದು, ಅಲ್ಲಿ ಅವರು ತಮ್ಮ ವಾದ, ಸಾಕ್ಷ್ಯಗಳನ್ನು ಮಂಡಿಸಬಹುದು ಎಂದು ನ್ಯಾಯಪೀಠ ಹೇಳಿದೆ. ಅಲ್ಲದೆ, ಆರೋಪಿಗಳ ವಿರುದ್ಧ ಕಾನೂನು ಬಾಹಿರ ಚಟುವಟಿಕೆಗಳ ತಡೆ ಕಾಯಿದೆ (ಯುಎಪಿಎ) ಹೊಡಿದ್ದ ಆರೋಪ ಕೈಬಿಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳನ್ನು ವಜಾಗೊಳಿಸಿದೆ.

ಸಕ್ಷಮ ಪ್ರಾಧಿಕಾರ ಆರೋಪಿಗಳ ವಿರುದ್ಧ ಕಠಿಣ ಯುಎಪಿಎ ಹೇರಲು ವಿವೇಚನೆ ಬಳಸಿಲ್ಲವೆಂದು ಈ ಹಂತದಲ್ಲಿಯೇ ಹೇಳಲಾಗದು. ಜೊತೆಗೆ ಆರೋಪವನ್ನು ಪುಷ್ಠೀಕರಿಸುವ ಸಾಕ್ಷ್ಯವನ್ನು ಪ್ರಾಸಿಕ್ಯೂಷನ್‌ ಒದಗಿಸಿದೆ. ಹಾಗಾಗಿ ಅಧೀನ ನ್ಯಾಯಾಲಯ ನೀಡಿರುವ ಆದೇಶ ಸರಿ ಇದೆ. ಅದರಲ್ಲಿ ಮಧ್ಯಪ್ರವೇಶ ಮಾಡುವುದಿಲ್ಲ ಎಂದು ನ್ಯಾಯಪೀಠ ಹೇಳಿದೆ
ಅರ್ಜಿದಾರರ ಪರ ವಕೀಲರು, ಬೆದರಿಕೆ ಆರೋಪಕ್ಕೆ ಕಠಿಣ ಯುಎಪಿಎ ಕಾಯಿದೆ ಹೇರಲಾಗಿದೆ. ಸಕ್ಷಮ ಪ್ರಾಧಿಕಾರದಿಂದ ಆ ಕಾಯಿದೆ ಹೇರಲು ಸೂಕ್ತ ಸಾಕ್ಷ್ಯವನ್ನು ಒದಗಿಸಿಲ್ಲ. ಪ್ರಾಧಿಕಾರ ಕೂಡ ತನ್ನ ವಿವೇಚನೆ ಬಳಕೆ ಮಾಡಿಲ್ಲ. ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳಿಲ್ಲದಿದ್ದರೂ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಹಾಗಾಗಿ ಅವರನ್ನು ಪ್ರಕರಣದಿಂದ ಕೈಬಿಡಬೇಕು ಎಂದು ನ್ಯಾಯಪೀಠವನ್ನು ಕೋರಿದ್ದರು.

Leave a Reply

Your email address will not be published. Required fields are marked *

You may have missed

error: Content is protected !!