ಮಂಗಳೂರು ಏರ್ಪೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ಪರ ಘೋಷಣೆ: ಮಿಥುನ್ ರೈ, ಐವನ್ ಡಿಸೋಜಾ ವಿರುದ್ಧ ಶೋಕಾಸ್ ನೊಟೀಸ್
ಮಂಗಳೂರು: ಮೊನ್ನೆ ಸಿಎಂ ಸಿದ್ದರಾಮಯ್ಯ ಮಂಗಳೂರಿಗೆ ಆಗಮಿಸಿದ ವೇಳೆ ಮಂಗಳೂರು ಏರ್ಪೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆಶಿ ಪರ ಘೋಷಣೆ ಕೂಗಿದ ಮಿಥುನ್ ರೈ ಮತ್ತು ಎಂಎಲ್ ಸಿ ಐವನ್ ಡಿಸೋಜಾ ಅವರಿಗೆ ಎಐಸಿಸಿ ಶೋಕಾಸ್ ನೊಟೀಸ್ ನೀಡಿದೆ.
ನಾರಾಯಣ ಗುರು ಹಾಗೂ ಮಹಾತ್ಮ ಗಾಂಧಿ ನಡುವಿನ ಸಂವಾದದ ಶತಮಾನೋತ್ಸವವನ್ನ ಮೊನ್ನೆ ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಕೆ.ಸಿ.ವೇಣುಗೋಪಾಲ್ ಕೇರಳದಿಂದ ಮಂಗಳೂರಿಗೆ ಆಗಮಿಸಿದ್ರು. ವೇಣುಗೋಪಾಲ್ ಮಂಗಳೂರು ವಿಮಾನ ನಿಲ್ದಾಣದಿಂದ ಆಚೆ ಬರುತ್ತಿದ್ದಂತೆಯೇ ಕಾಂಗ್ರೆಸ್ ಮುಖಂಡ ಮಿಥುನ್ ರೈ ಹಾಗೂ ಅವರ ಬೆಂಬಲಿಗರು ಡಿಕೆಶಿ ಪರವಾಗಿ ಘೋಷಣೆ ಕೂಗಿದ್ದರು. ಡಿಕೆ ಡಿಕೆ ಎಂದು ಘೋಷಣೆ ಕೂಗಿದ್ದಲ್ಲದೇ ಡಿಕೆ ಶಿವಕುಮಾರ್ ಅವರನ್ನು ಸಿಎಂ ಮಾಡಬೇಕೆಂದು ಆಗ್ರಹಿಸಿದ್ದರು. ಇದೀಗ ಪಕ್ಷದ ಶಿಸ್ತು ಉಲ್ಲಂಘಿಸಿದ ಕಾರಣ ಮಿಥುನ್ ರೈಗೆ ಎಐಸಿಸಿ ಕಾರ್ಯದರ್ಶಿ ರೋಜಿ ಜಾನ್ ಶೋಕಾಸ್ ನೋಟಿಸ್ ಜಾರಿ ಮಾಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಎಂದು ಘೋಷಿಸಿದ್ದ ಪರಿಷತ್ ಸದಸ್ಯ ಐವಾನ್ ಡಿಸೋಜಾಗೂ ಕಾಂಗ್ರೆಸ್ ಶಿಸ್ತು ಸಮಿತಿ ನೋಟಿಸ್ ನೀಡಿದೆ. ಸೂಕ್ತ ಕಾರಣ ನೀಡುವಂತೆ ಕಾಂಗ್ರೆಸ್ ನೋಟಿಸ್ ನೀಡಿದೆ. ಈ ಮೂಲಕ ಕೈನಲ್ಲಿ ಮತ್ತೆ ಸಿಎಂ ಕುರ್ಚಿಯ ಕಿತ್ತಾಟ ಹೆಚ್ಚಾಗದಂತೆ ಕ್ರಮಕೈಗೊಂಡಿದೆ.





