ವಿಟ್ಲ: ಕೇರಳ ರಾಜ್ಯ ಸಾರಿಗೆ ಬಸ್ಸು ಮರಕ್ಕೆ ಡಿಕ್ಕಿ
ವಿಟ್ಲ: ಕಾಸರಗೋಡು-ಪುತ್ತೂರು ರಸ್ತೆಯಲ್ಲಿ ಸಂಚರಿಸುತ್ತಿದ್ದ ಕೇರಳ ರಾಜ್ಯ ಸಾರಿಗೆ ಬಸ್ಸು ಉಕ್ಕುಡ ಸಮೀಪ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸಿನ ಮುಂಭಾಗ ಜಖಂಗೊಂಡಿದ್ದು, ಹಲವು ಪ್ರಯಾಣಿಕರಿಗೆ ಗಾಯಗಳಾಗಿರುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.
ಬಸ್ ಚಾಲಕನ ಅತಿಯಾದ ವೇಗ ಮತ್ತು ನಿರ್ಲಕ್ಷ್ಯತನದ ಚಾಲನೆಯಿಂದ ಈ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಅಪಘಾತದ ತೀವ್ರತೆಗೆ ಬಸ್ಸಿನಲ್ಲಿದ್ದ ಪ್ರಯಾಣಿಕರು ತೀವ ಆಘಾತಕ್ಕೊಳಗಾಗಿದ್ದು, ಕೆಲವರಿಗೆ ಗಾಯಗಳಾಗಿದೆ ಎಂದು ತಿಳಿದು ಬಂದಿದ್ದು, ಖಚಿತ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಅಪಘಾತಕ್ಕೀಡಾದ ಬಸ್ಸು ರಸ್ತೆಯ ಮಧ್ಯದಲ್ಲೇ ಕೆಟ್ಟು ನಿಂತಿದ್ದರಿಂದ ಪ್ರಯಾಣಿಕರು ಪರ್ಯಾಯ ಸಾರಿಗೆ ಇಲ್ಲದೆ ಪರದಾಡುವಂತಾಯಿತು.
ಅಪಘಾತ ಸಂಭವಿಸಿದ ಪ್ರದೇಶ ಕಿರಿದಾಗಿದ್ದು, ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದೆ ಕೆಟ್ಟು ನಿಂತ ಬಸ್ಸನ್ನು ರಸ್ತೆಯಲ್ಲೇ ಬಿಡಲಾಗಿದೆ. ಇದು ರಾತ್ರಿಯ ಸಮಯದಲ್ಲಿ ಇತರ ವಾಹನಗಳಿಗೆ ಅಪಾಯವನ್ನುಂಟು ಮಾಡಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.





