ಬೆಳ್ತಂಗಡಿ: ಹೆದ್ದಾರಿ ಕಾಮಗಾರಿಯ ಯಂತ್ರ ಢಿಕ್ಕಿ ಹೊಡೆದು ವೃದ್ಧ ಸಾವು
ಬೆಳ್ತಂಗಡಿ: ಪುಂಜಾಲಕಟ್ಟೆ-ಚಾರ್ಮಾಡಿ ಹೆದ್ದಾರಿ ಕಾಮಗಾರಿ ನಿರ್ವಹಿಸುವ ಯಂತ್ರವೊಂದು ಡಿಕ್ಕಿ ಹೊಡೆದು ವೃದ್ಧರೊಬ್ಬರು ಮೃತಪಟ್ಟ ಘಟನೆ ಮದ್ದಡ್ಕ ಮಸೀದಿ ಬಳಿ ಸಂಭವಿಸಿದೆ.
ಮೃತರನ್ನು ಇಂದಬೆಟ್ಟು ಗ್ರಾಮದ ಬೆದ್ರಬೆಟ್ಟು ನಿವಾಸಿ ಹಂಝಾ (72) ಎಂದು ಗುರುತಿಸಲಾಗಿದೆ. ಅವರು ಪತ್ನಿ, ಒಬ್ಬ ಮಗ ಮತ್ತು ಮೂವರು ಪುತ್ರಿಯರನ್ನು ಅಗಲಿದ್ದಾರೆ.
ಹಂಝಾ ಅವರು ಸೌದೆ ಕಡಿಯುವ ಕೆಲಸಕ್ಕೆಂದು ಮದ್ದಡ್ಕಕ್ಕೆ ಹೋಗಿದ್ದರು. ಅವರು ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ಚಾಲಕ ಬಿಹಾರಿ ರೈ ಎಂಬಾತ ಯಂತ್ರವನ್ನು ಅಜಾಗರೂಕತೆ ಮತ್ತು ನಿರ್ಲಕ್ಷ್ಯದಿಂದ ಹಿಂದಕ್ಕೆ ತೆಗೆದ ಕಾರಣ ಈ ಅಪಘಾತ ಸಂಭವಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಂಭೀರವಾಗಿ ಗಾಯಗೊಂಡ ಹಂಝಾ ಅವರನ್ನು ತಕ್ಷಣವೇ ಬೆಳ್ತಂಗಡಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಅವರು ಮೃತಪಟ್ಟಿದ್ದರು. ಈ ಕುರಿತು ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಂಝಾ ಅವರದ್ದು ಬಡ ಕುಟುಂಬವಾಗಿದ್ದು, ತಮ್ಮ ವೃದ್ಧಾಪ್ಯದಲ್ಲೂ ಸೌದೆ ಕಡಿಯುವ ಕೆಲಸಕ್ಕೆ ಹೋಗುತ್ತಿದ್ದರು. ಅವರ ಕುಟುಂಬ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದೆ.





