ಅನುಗ್ರಹ ಮಹಿಳಾ ಕಾಲೇಜು, ಕಲ್ಲಡ್ಕದಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ
ಬಂಟ್ವಾಳ: ಬಂಟ್ವಾಳ ತಾಲೂಕಿನ ಕಲ್ಲಡ್ಕ ಸಮೀಪದ ಗೋಳ್ತಮಜಲು ಎಂಬಲ್ಲಿ, ವಿದ್ಯಾರ್ಥಿನಿಯರಿಗಾಗಿರುವ ಪ್ರತಿಷ್ಠಿತ ವಿದ್ಯಾಸಂಸ್ಥೆಯಾಗಿರುವ ಅನುಗ್ರಹ ಮಹಿಳಾ ಕಾಲೇಜು ಇದರಲ್ಲಿ ಈ ಬಾರಿಯ 70ನೇ ವರ್ಷದ ಕನ್ನಡ ರಾಜ್ಯೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಪ್ರಥಮ ವಾಣಿಜ್ಯ ವಿಭಾಗದ ಕುಮಾರಿ ಫಾತಿಮತ್ ಅಝ್ಮಿಯ ತಮ್ಮ ಭಾಷಣದಲ್ಲಿ ಕನ್ನಡ ರಾಜ್ಯೋತ್ಸವದ ಇತಿಹಾಸದ ಬಗ್ಗೆ ಹೇಳುತ್ತಾ ಕನ್ನಡ ನಾಡು ನುಡಿಗಳನ್ನು ಬೆಳೆಸಿ ಉಳಿಸುವುದು ವಿದ್ಯಾರ್ಥಿನಿಯರಾದ ನಮ್ಮೆಲ್ಲರ ಕರ್ತವ್ಯವೆಂದು ಹೇಳಿದರು. ಬಳಿಕ ವೇದಿಕೆಗೆ ಬಂದ, ದ್ವಿತೀಯ ಬಿ.ಎ. ವಿಭಾಗದ ಫಾತಿಮತ್ ಶಮಿಯಾ ಇವರು ತಮ್ಮ ಭಾಷಣದಲ್ಲಿ
ಕರ್ನಾಟಕದ ವೈಶಿಷ್ಟ್ಯದ ಬಗ್ಗೆ ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ, ಕಾಲೇಜಿನ ಪ್ರಾಂಶುಪಾಲರಾದ ಡಾ. ಹೇಮಲತ ಬಿ.ಡಿ. ಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಕರ್ನಾಟಕ ರಾಜ್ಯ ರಚನೆಯ ಕುರಿತು ಮಾಹಿತಿ ನೀಡುತ್ತಾ, ಭಾರತದಲ್ಲಿ ವಿವಿಧತೆಯಲ್ಲಿ ಏಕತೆ ಇದೆ ಅದರಿಂದಲೇ, ನಮ್ಮ ದೇಶವು ಧರ್ಮ, ಜಾತಿ, ಮತಗಳ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸಿಕೊಂಡಿಲ್ಲ, ಬದಲಾಗಿ ಭಾಷೆಗಳ ಆಧಾರದ ಮೇಲೆ ವಿವಿಧ ಪ್ರಾಂತ್ಯಗಳನ್ನಾಗಿ ಬೇರ್ಪಡಿಸಲಾಗಿದೆ, ಹಾಗೆಯೇ ನಾವೆಲ್ಲರೂ ನಮ್ಮ ನೆಲದ ಮೇಲಿನ ಅಭಿಮಾನವನ್ನು ಬೆಳೆಸಿಕೊಂಡು ಇಲ್ಲಿನ ಕನ್ನಡವನ್ನು ಉಳಿಸಬೇಕು ಹಾಗೂ ಬೆಳೆಸಬೇಕು ಆದರೂ ಅದರೊಂದಿಗೆ ನಾವು ಭಾರತೀಯರು ಎಂಬ ಏಕತೆಯನ್ನು ಕಾಪಾಡಿಕೊಂಡು ಐಕ್ಯತೆಯಿಂದ ಬದುಕಬೇಕು ಎಂದು ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಈ ಕಾರ್ಯಕ್ರಮದ ಅಂಗವಾಗಿ ದ್ವಿತೀಯ ಬಿ.ಎ. ವಿದ್ಯಾರ್ಥಿನಿಯರು ನಾಡಗೀತೆಯನ್ನು ಹಾಡುವ ಮೂಲಕ ಮನರಂಜಿಸಿದರು. ವೇದಿಕೆಯಲ್ಲಿ ಅನುಗ್ರಹ ಸಲಹಾ ಸಮಿತಿಯ ಕಾರ್ಯದರ್ಶಿ ಶ್ರೀಮತಿ ತಾರಾಕ್ಷಿ, ಪದವಿ ಪೂರ್ವ ವಿಭಾಗದ ಸಂಯೋಜಕಿ ಶ್ರೀಮತಿ ಮಮಿತಾ. ಎಸ್. ರೈ, ಪದವಿ ವಿಭಾಗದ ಸಂಯೋಜಕಿ ಶ್ರೀಮತಿ ಆಬಿದ.ಬಿ, ಸಲಹಾ ಸಮಿತಿ ಸದಸ್ಯರಾದ ಶ್ರೀಮತಿ ಸಲೀಮಾ, ಶ್ರೀಮತಿ ನವ್ಯ ಉಪಸ್ಥಿತರಿದ್ದರು.
ದ್ವಿತೀಯ ಬಿಕಾಂ ವಿಭಾಗದ ಕುಮಾರಿ ಆಯಿಷತ್ತುಲ್
ಸೆಮೀನಾ ಆರಂಭದಲ್ಲಿ ಕಿರಾಅತ್ ಪಠಿಸಿದರು ಹಾಗೂ ಕಾರ್ಯಕ್ರಮವನ್ನು ನಿರೂಪಿಸಿದ ತೃತೀಯ ಬಿ.ಕಾಂ. ವಿಭಾಗದ ವಿದ್ಯಾರ್ಥಿನಿ ಕುಮಾರಿ ಖತೀಜತುಲ್ ಅನಿಷ ಆರಂಭದಲ್ಲಿ ಸ್ವಾಗತಿಸಿ, ಕೊನೆಯಲ್ಲಿ ಧನ್ಯವಾದವಿತ್ತರು.




