ಧರ್ಮಸ್ಥಳ ವಿರುದ್ದ ಅಪಪ್ರಚಾರಕ್ಕೆ ಬಿಜೆಪಿ ಆಕ್ರೋಶ: ಧರ್ಮಸ್ಥಳದಲ್ಲಿ BJP ಶಕ್ತಿ ಪ್ರದರ್ಶನ
ಧರ್ಮಸ್ಥಳ: ಧರ್ಮಸ್ಥಳ ವಿರುದ್ದ ಅಪಪ್ರಚಾರಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಧರ್ಮಸ್ಥಳದಲ್ಲಿ ಶಕ್ತಿಪ್ರದರ್ಶನ ಮಾಡಿದೆ.
ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಿಜೆಪಿ ಕಾರ್ಯಕರ್ತರು ಧರ್ಮಸ್ಥಳ ಚಲೋ ಯಾತ್ರೆಯ ಮೂಲಕ ಆಗಮಿಸಿದ್ದರು. 400ಕ್ಕೂ ಹೆಚ್ಚು ಕಾರುಗಳಲ್ಲಿ ಬಂದ ವಿಶ್ವನಾಥ್ ಅವರಿಗೆ ಧರ್ಮಸ್ಥಳದ ದ್ವಾರಬಾಗಿಲಿನಲ್ಲಿ ಬಿಜೆಪಿ ಕಾರ್ಯಕರ್ತರು ಪುಷ್ಪವೃಷ್ಟಿ ಮಾಡುವ ಮೂಲಕ ಸ್ವಾಗತಿಸಿದರು. ಸುಳ್ಳಿಗೆ ಸೋಲು,ಧರ್ಮಕ್ಕೆ ಜಯ ಘೋಷಣೆ ಕೂಗುತ್ತಾ ಬಿಜೆಪಿಗರು ಘೋಷಣೆ ಮೊಳಗಿಸಿದರು.
ಬಳಿಕ ಇಂದು ಬೆಳಗ್ಗೆ ರಾಜ್ಯ ಬಿಜೆಪಿ ನಿಯೋಗ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ದೇವರ ದರ್ಶನ ಪಡೆದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕರು, ಬಿಜೆಪಿಯ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ಪಕ್ಷದ ವಿವಿಧ ಪದಾಧಿಕಾರಿಗಳು ಭೇಟಿ ನೀಡಿ ದೇವರ ದರ್ಶನ ಪಡೆದು ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಎಸ್ ಐಟಿ ತನಿಖೆಯನ್ನು ಬಿಜೆಪಿ ಸ್ವಾಗತಿಸುತ್ತದೆ. ಆದರೆ ತನಿಖೆ ಪಾರದರ್ಶವಾಗಿ ನಡೆಯಬೇಕೆಂದು ಆಗ್ರಹಿಸುತ್ತದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಷಡ್ಯಂತ್ರ ಇದೆ ಎಂದು ಉಲ್ಲೇಖಿಸಿದ್ದಾರೆ ಆದರೆ ಈ ಷಡ್ಯಂತ್ರದ ಬಗ್ಗೆ ಯಾವುದೇ ರೀತಿಯ ಮಾಹಿತಿ ಬಹಿರಂಗಪಡಿಸುತ್ತಿಲ್ಲ. ಈ ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬ ಬಗ್ಗೆಯೂ ತನಿಖೆ ನಡೆಯಲಿ, ರಾಜ್ಯ ಸರಕಾರ ಅಪಪ್ರಚಾರಗಳಿಗೆ ಕಡಿವಾಣ ಹಾಕದೆ ಅಪಪ್ರಚಾರ ಎಸಗುತ್ತಿದೆ ಎಂದರು.
ಮಾಜಿ ಸಚಿವ ಸಿ ಟಿ ರವಿ ಮಾತನಾಡಿ ತನಿಖೆಯ ಬಗ್ಗೆ ಪ್ರಶ್ನಿಸುವುದಿಲ್ಲ. ಅಪಪ್ರಚಾರ ಮಾಡುತ್ತಿರುವವರ, ದೂರುದಾರನ ಹಿನ್ನೆಲೆ ಬಗ್ಗೆಯೂ ತನಿಖೆಯಾಗಬೇಕು. ಶವಗಳನ್ನು ಹೂತು ಹಾಕಿದ ಪ್ರಕರಣ ಕಪೋಲ ಕಲ್ಪಿತ ವಿಚಾರವಾಗಿದ್ದು ಇಷ್ಟೊಂದು ಕಡೆ ತೋಡಿದರು ಏನು ಸಿಕ್ಕಿಲ್ಲ. ಇದರಿಂದಲೇ ಈ ಪ್ರಕರಣದ ಸಂಪೂರ್ಣ ಚಿತ್ರಣ ಸಿಗುತ್ತಿದೆ. ಪ್ರಕರಣದ ವ್ಯವಸ್ಥಿತ ಷಡ್ಯಂತ್ರದ ಹಿಂದೆ ಶ್ರದ್ಧಾಭಂಗದ ಲಾಭ ಪಡೆಯುವ ಹುನ್ನಾರವೂ ಇದೆ ಎಂದರು.




