ಮಂಗಳೂರು: ಕೋಪದಿಂದ ಮನೆಯ ಶೋಕೇಸ್ ಗಾಜು ಕೈಯ್ಯಲ್ಲೇ ಹೊಡೆದ ಯುವಕ ಸಾವು
ಉಳ್ಳಾಲ : ಮನೆಯ ಶೋಕೇಸ್ ಗಾಜು ಕೈಯ್ಯಲ್ಲೇ ಒಡೆದ ಪರಿಣಾಮ ವಿವಾಹಿತನೋರ್ವ ತೀವ್ರ ರಕ್ತಸ್ರಾವ ಉಂಟಾಗಿ ಸಾವನ್ನಪ್ಪಿರುವ ಘಟನೆ ಉಳ್ಳಾಲದ ಮಾಡೂರು ಸೈಟ್ ನಲ್ಲಿ ತಡರಾತ್ರಿ ಸಂಭವಿಸಿದೆ.
ಮಾಡೂರ್ ಸೈಟ್ ನಿವಾಸಿ, ಸತೀಶ್ ನಾಯಕ್ ಎಂಬವರ ಪುತ್ರ ನಿತೇಶ್ ನಾಯಕ್(38) ಸಾವನ್ನಪ್ಪಿದವರು.
ಕೋಟೆಕಾರು ಬೀರಿ ಜಂಕ್ಷನ್ ಸಮೀಪ ತಂದೆ, ಸಹೋದರನ ಜೊತೆಗೆ ಗಲಾಟೆ ಮಾಡುತ್ತಾ ಬಂದಿದ್ದ ನಿತೇಶ್, ಮನೆಯಲ್ಲಿಯೂ ಸಹ ಗಲಾಟೆ ಮುಂದುವರಿಸಿದ್ದ. ಈ ವೇಳೆ ಆಕ್ರೋಶದಿಂದ ಮನೆಯೊಳಗಿದ್ದ ಶೋಕೇಸ್ ಗಾಜನ್ನು ಒಡೆದಿದ್ದರಿಂದಾಗಿ ಗಾಜು ಕೈಯ ಪ್ರಮುಖ ನರಕ್ಕೆ ತಗುಲಿ ತೀವ್ರ ರಕ್ತಸ್ರಾವ ಉಂಟಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಮೃತರ ತಾಯಿ ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




