ಬಂಟ್ವಾಳ: ಲಾರಿ ಮತ್ತು ದ್ವಿಚಕ್ರ ವಾಹನ ನಡುವೆ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು
ಬಂಟ್ವಾಳ: ಲಾರಿ ಮತ್ತು ದ್ವಿಚಕ್ರವಾಹನದ ನಡುವೆ ನಡೆದ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲಿಯೇ ಭೀಕರವಾಗಿ ಸಾವನ್ನಪ್ಪಿದ ಘಟನೆ ಬಿಸಿರೋಡಿನ ಅಜ್ಜಿಬೆಟ್ಟು ಕ್ರಾಸ್ ನಲ್ಲಿ ನಡೆದಿದೆ.
ಶಂಭೂರು ಕೊಪ್ಪಳ ನಿವಾಸಿ ಚಿದಾನಂದ ( 50) ಅಪಘಾತದಲ್ಲಿ ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ.
ಸ್ಕೂಟರ್ ಸವಾರ ಚಿದಾನಂದ ಅವರು ಬಿಸಿರೋಡು ಪೇಟೆಯಿಂದ ಅಜ್ಜಿಬೆಟ್ಟು ಕ್ರಾಸ್ ನಲ್ಲಿ ಕ್ರಾಸ್ ಮಾಡುವ ವೇಳೆ ಬಿಸಿರೋಡಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕ್ ರ್ ಲಾರಿ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಚಿದಾನಂದ ಅವರು ಬಂಟ್ವಾಳ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಿಬ್ಬಂದಿಯಾಗಿರುವ ಇವರಿಗೆ ಒಂದು ಹೆಣ್ಣು ಮತ್ತು ಗಂಡು ಮಗುವಿದೆ. ಪತ್ನಿ ಶಂಭೂರು ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಸಹಿತ ಬಂಧುಬಳಗವನ್ನು ಅಗಲಿದ್ದಾರೆ.
ಅಜ್ಜಿಬೆಟ್ಟು ಕ್ರಾಸ್ ಅಪಘಾತಕ್ಕೆ ಕಾರಣ :
ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ಮಧ್ಯೆ ಬಿಸಿರೋಡಿನ ಪ್ಲೈ ಓವರ್ ಕೊನೆಯಾಗುವ ಸ್ಥಳದಲ್ಲಿ ಅಂದರೆ ಅಜ್ಜಿಬೆಟ್ಟು ಕ್ರಾಸ್ ನಲ್ಲಿ ಕ್ರಾಸ್ ಮಾಡಲು ಅವಕಾಶ ನೀಡಿರುವುದು ಅಪಘಾತಕ್ಕೆ ಕಾರಣವಾಗುತ್ತಿದ್ದು, ಅನೇಕ ಜೀವಹಾನಿಯಾಗಿದೆ ಎಂದು ಸ್ಥಳೀಯರು ಆರೋಪಮಾಡಿದ್ದು, ಕ್ರಾಸಿಂಗ್ ಬಂದ್ ಮಾಡುವಂತೆ ಒತ್ತಾಯ ಮಾಡಿದ್ದಾರೆ.
ಯಾರದೋ ದೊಡ್ಡ ಮನುಷ್ಯರ ಒತ್ತಡಕ್ಕೆ ಮಣಿದು ರಾಜಕೀಯ ಮುಖಂಡರು ಇದಕ್ಕೆ ಅವಕಾಶ ಮಾಡಿ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಪ್ಲೈ ಓವರ್ ನಿಂದ ಬರುವ ವಾಹನಗಳು ನೇರವಾಗಿ ಡಿಕ್ಕಿಯಾಗುವ ಸಂಭವ ಹೆಚ್ಚಿರುವುದರಿಂದ ಇದು ಡೇಂಜರ್ ಸ್ಪಾಟ್ ಎಂದು ಸಾರ್ವಜನಿಕ ವಲಯದಲ್ಲಿ ಅರೋಪ ಕೇಳಿ ಬಂದಿದೆ.





