December 16, 2025

ವಿಟ್ಲ: ಬಾಕ್ಸೈಟ್ ಮಣ್ಣು ಸಾಗಾಟದ ಲಾರಿಗಳನ್ನು ತಡೆದ ವ್ಯಕ್ತಿಗಳ ವಿರುದ್ಧ ದಾಖಲಾದ ಪ್ರಕರಣ: ಇಬ್ಬರು ಆರೋಪಿಗಳ ವಿರುದ್ಧ ದಾಖಲಾದ ಪ್ರಕರಣಕ್ಕೆ ತಡೆಯಾಜ್ಞೆ ನೀಡಿದ ಹೈಕೋರ್ಟ್

0
image_editor_output_image-256419435-1750482347935

ವಿಟ್ಲ: ವಿಟ್ಲ ಸಮೀಪದ ಮಂಗಳಪದವು ಎಂಬಲ್ಲಿ ಇತ್ತೀಚೆಗೆ ನಿಂತಿದ್ದ ಬಾಕ್ಸೈಟ್ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಒಬ್ಬ ಮೃತಪಟ್ಟು ಮತ್ತೊಬ್ಬ ಗಂಭೀರ ಗಾಯಗೊಂಡ ಪ್ರಕರಣಕ್ಕೆ ಸಂಬಂಧಿಸಿ ಲಾರಿಗಳನ್ನು ತಡೆದ ವಿಚಾರವಾಗಿ ಸುಮಾರು 30 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಅವರ ಪೈಕಿ ಇಬ್ಬರ ಮೇಲೆ ದಾಖಲಾದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಮೇಗಿನಪೇಟೆ ನಿವಾಸಿ ಅಬ್ದುಲ್ ಸಮದ್ ಮತ್ತು ಒಕ್ಕೆತ್ತೂರು ನಿವಾಸಿ ಸುಲೈಮಾನ್ ಅವರ ಮೇಲಿದ್ದ ಪ್ರಕರಣದ ತನಿಖೆ ನಡೆಸದಂತೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.

ಬಂಟ್ವಾಳ ತಾಲೂಕು ವೀರಕಂಭ ಗ್ರಾಮದ ಮಂಗಳಪದವು ಎಂಬಲ್ಲಿ ಕೆಲವು ಜನರು ಉದ್ದೇಶಪೂರ್ವಕವಾಗಿ ಅಕ್ರಮ ಕೂಟ ಸೇರಿಕೊಂಡು ವಿಟ್ಲ-ಕಲ್ಲಡ್ಕ ರಸ್ತೆಯಲ್ಲಿ ಹೋಗುವ ಲಾರಿಗಳನ್ನು ತಡೆದು ನಿಲ್ಲಿಸಿ ಎಂಬುದಾಗಿ ಮಾಹಿತಿ ಬಂದ ಮೇರೆಗೆ, ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದು, ಈ ವೇಳೆ ಸದ್ರಿ ರಸ್ತೆಯಲ್ಲಿ ಸಂಭವಿಸಿರುವ ಅಫಘಾತ ಪ್ರಕರಣಗಳನ್ನು ನೆಪವಾಗಿಟ್ಟುಕೊಂಡು ಆರೋಪಿಗಳಾದ ರಿಯಾಝ್‌, ಅಬ್ದುಲ್ ಸಮದ್‌, ಕುಂಞಿಮೋನು, ರಹಿಮಾನ್‌, ಸಲೈಮಾನ್‌ ಮತ್ತು ಇತರ 25 ರಿಂದ 30 ಜನರು ರಸ್ತೆಯಲ್ಲಿ ಘನ ವಾಹನಗಳು ಸಂಚರಿಸದಂತೆ ತಡೆಯೊಡ್ಡಿರುವುದು ಹಾಗೂ ಸದ್ರಿ ರಸ್ತೆಯಲ್ಲಿ ಯಾವುದೇ ಘನ ಲಾರಿಗಳನ್ನು ಸಂಚರಿಸಲು ಬಿಡುವುದಿಲ್ಲ ಎಂಬುದಾಗಿ ಜೋರಾಗಿ ಬೊಬ್ಬೆ ಹಾಕಿರುವುದಾಗಿ ಎಂದು ಆರೋಪಿಸಿ ವಿಟ್ಲ ಪೊಲೀಸರು ಆರೋಪಿಗಳ ವಿರುದ್ದ ವಿಟ್ಲ ಪೊಲೀಸ್‌ ಠಾಣಾ ಅ.ಕ್ರ: 73/2025 ಕಲಂ: 189(2)(3), 191 (2), 126(2), 190 BNS 2023 ಯಂತೆ ಪ್ರಕರಣ ದಾಖಲಿಸಿದ್ದರು.

ಈ ಬಗ್ಗೆ ಅಬ್ದುಲ್ ಸಮದ್ ಮತ್ತು ಸುಲೈಮಾನ್ ಅವರು ಪ್ರಕರಣಕ್ಕೆ ತಡೆ ನೀಡುವಂತೆ ಹೈಕೋರ್ಟ್ ಮೆಟ್ಟಿಲೆರಿದ್ದರು.

ಅರ್ಜಿದಾರರ ಪರ ವಕೀಲರಾದ ಅನ್ಸಾರ್ ವಿಟ್ಲ ಅವರ ವಾದವನ್ನು ಆಲಿಸಿದ ನ್ಯಾಯಮೂರ್ತಿ ಕೃಷ್ಣ ಕುಮಾರ್ ಅವರಿದ್ದ ಏಕ ಸದಸ್ಯಪೀಠ ಮುಂದಿನ ತನಿಖೆಗೆ ತಡೆ ನೀಡಿದ್ದು, ವಿಚಾರಣೆಯನ್ನು ಜುಲೈ 18ಕ್ಕೆ ಮುಂದೂಡಿದೆ. ಅಲ್ಲದೇ ಅರ್ಜಿದಾರರ ವಿರುದ್ಧ ಇರುವ ದಾಖಲೆಗಳನ್ನು ಮತ್ತು ಅರ್ಜಿದಾರರ ಅರ್ಜಿಗೆ ಆಕ್ಷೇಪಣೆಯನ್ನು ಮುಂದಿನ ದಿನಾಂಕದೊಳಗಡೆ ಸಲ್ಲಿಸಲು ಸರಕಾರಿ ವಕೀಲರಿಗೆ ಸೂಚಿಸಿದೆ.

Leave a Reply

Your email address will not be published. Required fields are marked *

error: Content is protected !!