ಮಂಗಳೂರು: ಮೀನುಗಾರನನ್ನು ತಲೆ ಕೆಳಗಾಗಿಸಿ ಕೈಕಾಲು ಕಟ್ಟಿ ಹಲ್ಲೆ:
ತಾಲಿಬಾನ್ ಮಾದರಿಯಲ್ಲಿ ದೌರ್ಜನ್ಯ ಎಸೆಗಿದವರ ಮೇಲೆ ಕೊಲೆಯತ್ನ ಪ್ರಕರಣ
ಮಂಗಳೂರು: ವ್ಯಕ್ತಿಯೊಬ್ಬನನ್ನು ತಲೆ ಕೆಳಗಾಗಿಸಿ ಕೈಕಾಲು ಕಟ್ಟಿ ಹಲ್ಲೆಗೈದು ತಾಲಿಬಾನ್ ಮಾದರಿಯಲ್ಲಿ ದೌರ್ಜನ್ಯ ನಡೆಸುತ್ತಿರುವ ಘಟನೆಯ ವಿಡಿಯೋ ಲೀಕ್ ಆಗಿದ್ದು ಮಂಗಳೂರಿನ ಮೀನುಗಾರಿಕಾ ದಕ್ಕೆಯಲ್ಲಿ ಕೃತ್ಯ ನಡೆದಿದೆ.
ದಕ್ಕೆಯಲ್ಲಿ ಆಂಧ್ರಪ್ರದೇಶ ಮೂಲದ ಮೀನುಗಾರಿಕಾ ಕಾರ್ಮಿಕನನ್ನು ಈ ರೀತಿ ಕಾಲನ್ನು ಮೇಲಕ್ಕೆ ಕಟ್ಟಿ ನೇತಾಡಿಸಿದ್ದು ಇದರ ವಿಡಿಯೋ ವೈರಲ್ ಆಗಿದೆ. ದೌರ್ಜನ್ಯಕ್ಕೊಳಗಾದ ಕಾರ್ಮಿಕನನ್ನು ವೈಲಾ ಶೀನು ಎಂದು ಗುರುತಿಸಲಾಗಿದೆ.
ಮೊಬೈಲ್ ಕದ್ದ ಆರೋಪದಲ್ಲಿ ಇತರ ಕಾರ್ಮಿಕರು ಸೇರಿ ಬೋಟ್ ನಿಲ್ಲಿಸುವ ದಕ್ಕೆಯಲ್ಲಿ ವ್ಯಕ್ತಿಯನ್ನು ತಲೆಕೆಳಗಾಗಿಸಿ ಕಟ್ಟಿ ದೌರ್ಜನ್ಯ ನಡೆಸಿದ್ದಾರೆ. ತಮಿಳು, ತೆಲುಗು ಮಾತನಾಡುತ್ತಿದ್ದು ನಿಜ ಬೊಗಳೋ, ಇಲ್ಲಾಂದ್ರೆ ಕೊಂದು ಬಿಡ್ತೀವಿ ಎಂದು ಬೆದರಿಸುತ್ತಿದ್ದಾರೆ. ತೆಲುಗು ಕಾರ್ಮಿಕನನ್ನು ತಮಿಳುನಾಡು ಮತ್ತು ಆಂಧ್ರಪ್ರದೇಶದ ಮೀನು ಕಾರ್ಮಿಕರೇ ಸೇರಿ ದೌರ್ಜನ್ಯ ನಡೆಸಿದ್ದಾರೆ. ಕೈಯಲ್ಲಿ ಚೈನ್ ಹಿಡಿದು ಹಲ್ಲೆ ನಡೆಸುತ್ತಿರುವುದು ವಿಡಿಯೋದಲ್ಲಿದೆ. ಸುತ್ತ ನಿಂತಿರುವ ಐದಾರು ಮಂದಿ ಸೇರಿ ಹಲ್ಲೆ ನಡೆಸುತ್ತಿದ್ದಾರೆ. ಬೋಟಿನ ಎತ್ತರದ ಕಂಬಿಗೆ ಹಗ್ಗ ಕಟ್ಟಿ ವ್ಯಕ್ತಿಯನ್ನು ನೇತು ಹಾಕಲಾಗಿತ್ತು.
ಘಟನೆ ಕೆಲವು ದಿನಗಳ ಹಿಂದೆ ನಡೆದಿದೆ ಎನ್ನಲಾಗುತ್ತಿದ್ದು ವಿಡಿಯೋ ಆಧರಿಸಿ ಪಾಂಡೇಶ್ವರ ಪೊಲೀಸರು ಕೊಲೆಯತ್ನ ಸೇರಿದಂತೆ ವಿವಿಧ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ.






