ಸುಳ್ಯ: ಅಂಗನವಾಡಿ ಕೇಂದ್ರಕ್ಕೆ ಮಕ್ಕಳನ್ನು ಸೇರಿಸಿಕೊಳ್ಳುತ್ತಿಲ್ಲ ಎಂಬ ಆರೋಪ:
ಅಂಗನವಾಡಿಯ ಎದುರು ಪ್ರತಿಭಟನೆ
ಸುಳ್ಯ: ಅಂಗನವಾಡಿ ಕೇಂದ್ರಗಳಲ್ಲಿ ತಮ್ಮ ಸರ್ವೆ ವ್ಯಾಪ್ತಿಗೆ ಸಂಬಂಧಿಸದ ಮಕ್ಕಳನ್ನು ಕಲಿಕೆಗಾಗಿ ಅಂಗನವಾಡಿಗೆ ಸೇರಿಸಿಕೊಳ್ಳುವುದಿಲ್ಲ ಎಂಬ ನಿಯಮ ಇದೆ ಎಂದು ಸಂಬಂಧಿಸಿದ ಇಲಾಖೆಗಳ ನಿಯಮವಾಗಿದೆ.
ಅದರಂತೆ ಸುಳ್ಯ ತಾಲೂಕಿನ ಪೈಂಬೆಚ್ಚಾಲು ಗ್ರಾಮದ ಕಡೆಯಿಂದ ಕೋಲ್ಚಾರು ಅಂಗನವಾಡಿ ಕೇಂದ್ರಕ್ಕೆ ಬರುವ ಮೂರು ಮಕ್ಕಳನ್ನು ಸರ್ವೇ ವ್ಯಾಪ್ತಿಗೆ ಬಾರದ ಕಾರಣ ಆ ಭಾಗದ ಅಂಗನವಾಡಿ ಕೇಂದ್ರಕ್ಕೆ ಸೇರ್ಪಡೆ ಮಾಡಲಾಗುವುದಿಲ್ಲ ಎಂಬ ಮಾಹಿತಿಯನ್ನು ಅಂಗನವಾಡಿ ಶಿಕ್ಷಕಿ ಪೋಷಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಆಕ್ರೋಶ ಗೊಂಡ ಮಕ್ಕಳ ಪೋಷಕರು ತಮ್ಮ ಮಕ್ಕಳೊಂದಿಗೆ ಅಂಗನವಾಡಿಯ ಮುಂಭಾಗದಲ್ಲಿ ಡಿಸೆಂಬರ್ 21ರಂದು ಉಪವಾಸ ಪ್ರತಿಭಟನೆಯನ್ನು ಮಾಡಿರುತ್ತಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಪೋಷಕರು, ಕಳೆದ ಹಲವಾರು ವರ್ಷಗಳಿಂದ ನಮ್ಮ ಮನೆಯ ಮಕ್ಕಳು ಇದೇ ಅಂಗನವಾಡಿ ಕೇಂದ್ರಕ್ಕೆ ಬರುತ್ತಿದ್ದರು. ಇದೀಗ ಸಣ್ಣ ಮಕ್ಕಳು ಪ್ರಾಥಮಿಕ ಶಾಲೆಗೆ ಬರುವ ದೊಡ್ಡ ಮಕ್ಕಳ ಜತೆ ಬರುತ್ತಿದ್ದಾರೆ. ಈ ಹಿಂದೆ ಇಲ್ಲದ ಕಾನೂನು ಇದ್ದಕ್ಕಿದ್ದಂತೆ ಉದ್ಭವಿಸಿದಾದರೂ ಹೇಗೆ ಕಳೆದ 50 ದಿನಗಳಿಂದ ನಮ್ಮ ಮಕ್ಕಳು ಶಾಲೆಗೆ ಬರದೆ ಮನೆಯಲ್ಲಿಯೇ ಇದ್ದಾರೆ.
ಒಂದು ವೇಳೆ ಮತ್ತೆ ನಮ್ಮ ಮೂರು ಮಕ್ಕಳನ್ನು ಸೇರಿಸಿಕೊಳ್ಳದೆ ಇದ್ದರೆ ಮನೆಯಲ್ಲಿ ಉಳಿಸಿಕೊಳ್ಳುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಕ್ಕಳನ್ನು ಸೇರಿಸದಿದ್ದರೆ ಪೈಂಬೆಚ್ಚಾಲು ಕೇಂದ್ರಕ್ಕೆ ಕಳುಹಿಸುವುದಿಲ್ಲ ಎಂಬ ತೀರ್ಮಾನಕ್ಕೆ ಬಂದ ಮಕ್ಕಳ ಪೋಷಕರಾದ ಮನೋಜ್ ಕೋಲ್ಚಾರು, ಗಿರೀಶ್ ಪಡ್ಡಂಬೈಲು, ರಮ್ಯ ಕುಡೆಂಬಿ ತಮ್ಮ ಸಣ್ಣ ಮಕ್ಕಳ ಜತೆ ಉಪವಾಸ ನಿರತ ಪ್ರತಿಭಟನೆಯನ್ನು ಅಂಗನವಾಡಿಯ ಮುಂದೆ ಕೈಗೊಂಡರು.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು ಹಾಗೂ ಸದಸ್ಯೆ ಗೀತಾ ಕೋಲ್ಚಾರು ರವರು ಸಿ.ಡಿ.ಪಿ.ಒ.ರವರಿಗೆ ದೂರವಾಣಿ ಮೂಲಕ ವಿಷಯ ತಿಳಿಸಿದ್ದಾರೆ. ಇಲಾಖೆಯ ಅಧಿಕಾರಿ ಬೇರೆ ಕಡೆ ಕಾರ್ಯಕ್ರಮ ದಲ್ಲಿರುವುದರಿಂದ ಇವತ್ತು ಬರಲು ಸಾಧ್ಯವಾಗುವುದಿಲ್ಲ. ನಾಳೆ ಬಂದು ಪರಿಶೀಲಿಸಿ ಸಮಸ್ಯೆ ಬಗೆಹರಿಸಲಾಗುವುದು. ಆದ್ದರಿಂದ ಪ್ರತಿಭಟನೆ ನಿರತ ಪೋಷಕರನ್ನು ಸಮಾಧಾನಿಸಿ ಪ್ರತಿಭಟನೆ ಕೈ ಬಿಡುವಂತೆ ಪೋಷಕರ ಮನವೊಲಿಸುವಂತೆ ವಿನಂತಿಸಿದ್ದರು.
ಈ ವಿಚಾರವನ್ನು ತಿಳಿಸಿದ ಮೇರೆಗೆ ಪೋಷಕರು ಒಪ್ಪಿಕೊಂಡು ಪ್ರತಿಭಟನೆ ನಿಲ್ಲಿಸಿದರು.
ನಂತರ ಡಿ.22 ರಂದು ಸಿಡಿಪಿಒ ರಶ್ಮಿ ನೆಕ್ರಾಜೆ ಹಾಗೂ ಮೇಲ್ವಿಚಾರಕಿ ದೀಪಿಕಾರವರು ಕೋಲ್ಚಾರು ಅಂಗನವಾಡಿ ಕೇಂದ್ರಕ್ಕೆ ಬಂದು ಅಲ್ಲಿ ಸೇರಿದ ಬಾಲವಿಕಾಸ ಸಮಿತಿ ಸದಸ್ಯರು ಮತ್ತು ಪೋಷಕರು ಹಾಗೂ ಸ್ಥಳೀಯ ಪಂಚಾಯತ್ ಉಪಾಧ್ಯಕ್ಷ ರ ಮತ್ತು ಸದಸ್ಯರ, ಎರಡು ಅಂಗನವಾಡಿ ಕೇಂದ್ರ ಶಿಕ್ಷಕಿಯರ ಸಮಕ್ಷಮದಲ್ಲಿ ಸಭೆ ನಡೆಸಿ ಚರ್ಚಿಸಿ ಮತ್ತೆ ಆ ಮೂರು ಮಕ್ಕಳನ್ನು ಇದೇ ಕೇಂದ್ರದ ವ್ಯಾಪ್ತಿಯಲ್ಲಿ ಬರುವಂತೆ ಸರ್ವೆ ನೋಂದಾವಣೆ ಮಾಡುವಂತೆ ಸೂಚಿಸಿದರು.
ಮುಂದಿನ ಜನವರಿ ತಿಂಗಳಿನಿಂದ ಮೂರು ಮಕ್ಕಳಿಗೆ ನೀಡಲ್ಪಡುವ ಸವಲತ್ತುಗಳನ್ನು ಕೋಲ್ಚಾರು ಕೇಂದ್ರದಿಂದ ಪಡೆದುಕೊಳ್ಳುವಂತೆ ಆದೇಶಿಸಿದರು.
ಪ್ರಸ್ತುತ ಸರಕಾರದ ಡಿಜಿಟಲೀಕರಣ ಯೋಜನೆಯ ಪ್ರಕಾರ ಗಡಿ ಭಾಗದಲ್ಲಿರುವ ಮನೆಗಳನ್ನು ಹೊರತುಪಡಿಸಿ ಮಧ್ಯೆ ಭಾಗದಲ್ಲಿ ಇರುವ ಮನೆಗಳನ್ನು ಸೇರಿಸಿಕೊಳ್ಳುವ ಹಾಗಿಲ್ಲ.
ಸರ್ವೆ ವ್ಯಾಪ್ತಿಗೆ ಒಳಪಡುವ ಮನೆಯ ಬಾಣಂತಿಯರಿಗೆ, ಗರ್ಭಿಣಿ ಮಹಿಳೆಯರಿಗೆ ಹಾಗೂ ಪ್ರಾಥಮಿಕ ಪೂರ್ವ ಮಕ್ಕಳ ಶಿಕ್ಷಣದ ಜತೆ ಪಾಲನೆಗೆ ನೀಡಲ್ಪಡುವ ಸವಲತ್ತುಗಳನ್ನು ಆಯಾಯ ಅಂಗನವಾಡಿ ಕೇಂದ್ರ ಗಳಲ್ಲಿ ಪಡೆದುಕೊಳ್ಳಬೇಕೆಂಬ ಸುತ್ತೋಲೆ ಇದೆ.
ಎರಡು ಅಂಗನವಾಡಿ ಕೇಂದ್ರ ದ ಶಿಕ್ಷಕಿಯರ ಸಹಮತದ ಒಪ್ಪಿಗೆಯ ಮೇರೆಗೆ ಹಾಗೂ ಸೇರಿರುವ ಎಲ್ಲರ ಅಭಿಪ್ರಾಯದ ಮನ್ನಣೆಗೆ ಮಾನವೀಯತೆಯ ದೃಷ್ಟಿಯಿಂದ ಕಾನೂನಿನ ನಿಯಮದಲ್ಲಿ ಸ್ವಲ್ಪ ಮಟ್ಟಿನ ಸಡಿಲಿಕೆ ಮಾಡಿಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.
ಯಾವುದೇ ಕಾರಣಕ್ಕೆ ಮಕ್ಕಳು ಮನೆಯಲ್ಲಿಯೇ ಉಳಿಯಬಾರದು. ಅವರಿಗೆ ಸರಕಾರದಿಂದ ಸಿಗುವ ಸವಲತ್ತುಗಳು ಕಾಲ ಕಾಲಕ್ಕೆ ಸಿಗಬೇಕು. ಈ ಬಗ್ಗೆ ಆಯಾಯ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಜವಾಬ್ದಾರರಾಗಿರುತ್ತಾರೆ ಎಂದು ಸಿಡಿಪಿಒ ರವರು ಸೂಚಿಸಿದರು.
ಸಭೆಯಲ್ಲಿ ಪಂಚಾಯತ್ ಉಪಾಧ್ಯಕ್ಷ ದಿನೇಶ್ ಕಣಕ್ಕೂರು,ಆಲೆಟ್ಟಿ ಸೊಸೈಟಿ ಉಪಾಧ್ಯಕ್ಷ ಕರುಣಾಕರ ಹಾಸ್ಪಾರೆ, ಪಂ.ಸದಸ್ಯರಾದ ಗೀತಾ ಕೋಲ್ಚಾರು, ಶಂಕರಿ ಕೊಲ್ಲರಮೂಲೆ,ಧರ್ಮಪಾಲ ಕೊಯಿಂಗಾಜೆ, ಸೊಸೈಟಿ ನಿರ್ದೇಶಕ ಸುದರ್ಶನ ಪಾತಿಕಲ್ಲು, ಬಾಲವಿಕಾಸ ಸಮಿತಿ ಅಧ್ಯಕ್ಷೆ ಪ್ರೇಮಲತಾ, ಪೋಷಕರ ಪೈಕಿ ಮನೋಜ್ ಕೋಲ್ಚಾರು, ಗಿರೀಶ್ ಪಡ್ಡಂಬೈಲು, ರಮ್ಯ , ಪಂ.ಮಾಜಿ ಸದಸ್ಯ ಸೋಮನಾಥ ಕುಡೆಂಬಿ, ಸ್ಥಳೀಯರಾದ ನೀಲಕಂಠ ಕೊಲ್ಲರಮೂಲೆ, ಧನು ಕೋಲ್ಚಾರು, ಪ್ರದೀಪ್ ಕೊಲ್ಲರಮೂಲೆ ಹಾಗೂ ಆಶಾ ಕಾರ್ಯಕರ್ತೆ ಯರು,ಪೋಷಕರು, ಸ್ಥಳೀಯ ಗ್ರಾಮಸ್ಥರು ಉಪಸ್ಥಿತರಿದ್ದರು.





