ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ NIA ಹಸ್ತಾಂತರ ಹಿನ್ನೆಲೆ: ಈ ಬಗ್ಗೆ ಸಭೆ ನಡೆಸಿ ತೀರ್ಮಾನ ಎಂದ ಗೃಹ ಸಚಿವ ಪರಮೇಶ್ವರ್
ಬೆಂಗಳೂರು: ಸುಹಾಸ್ ಶೆಟ್ಟಿ ಕೊಲೆ ಪ್ರಕರಣವನ್ನು ಎನ್ಐಎಗೆ ವಹಿಸುವ ಬಗ್ಗೆ ಸಭೆ ನಡೆಸಿ ತೀರ್ಮಾನಿಸಲಾಗುವುದು ಎಂದು ಗೃಹ ಸಚಿವ ಪರಮೇಶ್ವರ್ ತಿಳಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸುವಂತೆ ಕೇಂದ್ರ ಗೃಹ ಇಲಾಖೆಯಿಂದ ಪತ್ರ ಬಂದಿದೆ. ಪತ್ರದ ಬಗ್ಗೆ ಸಭೆ ನಡೆಸಿ ಎನ್ಐಎಗೆ ಕೊಡಬೇಕೇ, ಬೇಡವೇ ಎಂದು ತೀರ್ಮಾನ ಮಾಡಲಾಗುವುದು ಎಂದು ಸುದ್ದಿಗಾರರ ಪ್ರಶ್ನೆಗೆ ಪರಮೇಶ್ವರ್ ಉತ್ತರಿಸಿದ್ದಾರೆ.
ಎನ್ಐಎಗೆ ಯಾರು ಶಿಫಾರಸು ಮಾಡಿದ್ದಾರೆಂದು ಗೊತ್ತಿಲ್ಲ. ಪ್ರಕರಣ ವರ್ಗಾಯಿಸುವಂತೆ ಗೃಹ ಇಲಾಖೆಯಿಂದ ಪತ್ರ ಬಂದಿದೆ. ನಮ್ಮ ಪೊಲೀಸರು ಸಮರ್ಥವಾಗಿ ತನಿಖೆ ನಡೆಸುತ್ತಿದ್ದಾರೆ. ಯಾವ ಆಧಾರದಲ್ಲಿ ಎನ್ಐಎ ವಹಿಸಲು ಕೇಳಿದ್ದಾರೆಂದು ಗೊತ್ತಿಲ್ಲ ಎಂದರು.
ವಿಧಾನ ಪರಿಷತ್ತಿಗೆ ನಾಲ್ವರ ನೇಮಕಕ್ಕೆ ತಡೆ ನೀಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಅದರ ಬಗ್ಗೆ ನನಗೆ ಗೊತ್ತಿಲ್ಲ. ಯಾರಿಗೆ ಅನ್ಯಾಯ ಆಗಿದೆ ಎಂದೂ ಗೊತ್ತಿಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಗೊತ್ತಿರಬಹುದೋ ಏನೋ ಎಂದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ಎನ್ಐಎ ತನಿಖೆಗೆ ವಹಿಸಿ ಕೇಂದ್ರ ಗೃಹ ಇಲಾಖೆ ಆದೇಶ ಮಾಡಿತ್ತು. ರಾಜ್ಯ ಸರ್ಕಾರದ ಶಿಫಾರಸು ಇಲ್ಲದೆಯೂ ರಾಜ್ಯ ಪೊಲೀಸರು ನಡೆಸುತ್ತಿದ್ದ ಪ್ರಕರಣವನ್ನು ಎನ್ಐಎ ವಹಿಸಿದ್ದು ಕುತೂಹಲ ಮೂಡಿಸಿದೆ. ಬಿಜೆಪಿ ಮತ್ತು ಹಿಂದು ಸಂಘಟನೆ ನಾಯಕರು, ಸುಹಾಸ್ ಹತ್ಯೆ ವಿಚಾರದಲ್ಲಿ ಭಯೋತ್ಪಾದಕ ಶಕ್ತಿಗಳ ಕೈವಾಡ ಇದೆ, ವಿದೇಶಿ ಫಂಡಿಂಗ್ ಆಗಿದೆಯೆಂದು ಆರೋಪಿಸಿ ಎನ್ಐಎ ತನಿಖೆಗೆ ಆಗ್ರಹಿಸಿದ್ದರು.




