ಹನಿಮೂನ್ ಗೆ ತೆರಳಿದ ಜೋಡಿ ನಾಪತ್ತೆ ಪ್ರಕರಣ: ಪತಿಯ ಕೊಲೆಗೆ ಸಂಚು ರೂಪಿಸಿದ್ದ ಪತ್ನಿಯ ಬಂಧನ
ಶಿಲ್ಲಾಂಗ್: ಹನಿಮೂನ್ ಗೆಂದು ಮೇಘಾಲಯಕ್ಕೆ ತೆರಳಿದ್ದ ಇಂದೋರ್ ದಂಪತಿ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿಯ ಕೊಲೆಗೆ ಸಂಚು ರೂಪಿಸಿದ ಆರೋಪದಡಿ ಉತ್ತರ ಪ್ರದೇಶದ ಗಾಜಿಪುರದಲ್ಲಿ ಪತ್ನಿಯನ್ನು ಬಂಧಿಸಲಾಗಿದೆ.
ರಾಜಾ ರಘುವಂಶಿ (30) ಹತ್ಯೆಗೆ ಸಂಬಂಧಿಸಿದಂತೆ ಪತ್ನಿ ಸೋನಮ್ ರಘುವಂಶಿ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಸೋನಮ್ ಕೊಲೆಗಾರರನ್ನು ನೇಮಿಸಿಕೊಂಡು ಹನಿಮೂನ್ ಸಮಯದಲ್ಲಿ ತನ್ನ ಪತಿಯ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಮೇಘಾಲಯ ಡಿಜಿಪಿ ಇದಶಿಶಾ ನೊಂಗ್ರಾಂಗ್ ಹೇಳಿದ್ದಾರೆ.
ಮೇ 23ರಂದು ಹನಿಮೂನ್‌ಗೆಂದು ಮೇಘಾಲಯಕ್ಕೆ ಆಗಮಿಸಿದ್ದ ದಂಪತಿ, ಮಳೆಯಲ್ಲಿ ಸಮೃದ್ಧಿಯಾದ ಬೆಟ್ಟದ ಸೌಂದರ್ಯವನ್ನು ಕಣ್ತುಂಬಿಕೊಳ್ಳುವ ಸಲುವಾಗಿ ಚಿರಾಪುಂಜಿಗೆ ಬಂದಿದ್ದರು. ಈ ವೇಳೆ ಇಬ್ಬರೂ ನಾಪತ್ತೆಯಾಗಿದ್ದರು. ಈ ಸಂಬಂಧ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರಿಗೆ ಆಳವಾದ ಕಂದಕದಲ್ಲಿ ಮೃತದೇಹವೊಂದು ಸಿಕ್ಕಿದ್ದು, ಕೈಯಲ್ಲಿದ್ದ ಟ್ಯಾಟೂ ನೋಡಿ ಇದು ಮೃತ ರಘುವಂಶಿಯದ್ದೇ ಎಂದು ಪತ್ತೆ ಮಾಡಲಾಗಿತ್ತು.
ರಾಜಾ ರಘುವಂಶಿ ಹತ್ಯೆಗೆ ಕಾರಣವೇನು? ಸೋನಮ್ಗೆ ಬೇರೆಯೊಬ್ಬರ ಜತೆ ಅಕ್ರಮ ಸಂಬಂಧವಿತ್ತು. ಹೀಗಾಗಿ ಪತಿಯನ್ನು ಕೊಲೆ ಮಾಡಲು ಬಯಸಿದ್ದಳು. ಈ ಹನಿಮೂನ್ ಟ್ರಿಪ್ನ್ನು ರಾಜಾನನ್ನು ಕೊಲ್ಲುವುದಕ್ಕಾಗಿಯೇ ಪ್ಲ್ಯಾನ್ ಮಾಡಿದ್ದಳು ಎನ್ನುವ ಮಾಹಿತಿ ಲಭ್ಯವಾಗಿದೆ. ಸೋನಮ್ ಪೊಲೀಸರಿಗೆ ಶರಣಾಗಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಮೇಘಾಲಯದ ಉಪ ಪೊಲೀಸ್ ಮಹಾನಿರ್ದೇಶಕ ಡೇವಿಸ್ ಮರಕ್ ಇಂಡಿಯಾ ಟುಡೇಗೆ ಸಂದರ್ಶನ ನೀಡಿದ್ದಾರೆ ಅದರಲ್ಲಿ ಕೆಲವು ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದು ಒಂದು ನಿರ್ದಯ ಕೊಲೆಯಾಗಿದ್ದು, ರಾಜಾನನ್ನು ಕೊಲ್ಲಲು ಈ ಪ್ರವಾಸವನ್ನು ಯೋಜಿಸಲಾಗಿತ್ತು ಎಂದು ಹೇಳಿದ್ದಾರೆ. ಪ್ರಾಥಮಿಕ ತನಿಖೆಯ ನಂತರ, ವಿವಾಹೇತರ ಸಂಬಂಧವೇ ಪ್ರಾಥಮಿಕ ಉದ್ದೇಶವೆಂದು ತೋರುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.





