ಬಂಟ್ವಾಳ: ರಹೀಮ್ ಹತ್ಯೆ ಪ್ರಕರಣ-ಕಾಂಗ್ರೆಸ್ ಸರಕಾರದ ವಿರುದ್ಧ ಆಕ್ರೋಶ: ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಅಬ್ದುಲ್ ಸಮದ್ ವಿಟ್ಲ
ವಿಟ್ಲ: ಮುಸ್ಲಿಂ ಯುವಕ ರಹೀಮ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನ ನೀತಿಯನ್ನು ಖಂಡಿಸಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಯೂತ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಬ್ದುಲ್ ಸಮದ್ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ರಾಜೀನಾಮೆ ಸಲ್ಲಿಸಿದ ಸಮದ್ ಅವರು ಕರಾವಳಿಯಲ್ಲಿ ಕೋಮು ಗಲಭೆಗಳನ್ನು ತಡೆಗಟ್ಟಲು ಯಾವುದೇ ಕ್ರಮ ಕೈಗೊಳ್ಳದಿರುವುದು ಕಾಂಗ್ರೆಸ್ ಪಕ್ಷದ ಶಕ್ತಿಹೀನತೆಯನ್ನು ಎತ್ತಿ ತೋರಿಸುತ್ತದೆ. ಪೊಲೀಸ್ ಇಲಾಖೆಯು ಸರ್ಕಾರದ ಹಿಡಿತದಲ್ಲಿಲ್ಲದಿರುವುದು ಗಂಭೀರ ಕಳವಳದ ವಿಷಯವಾಗಿದೆ. ಶರಣ್ ಪಂಪ್‌ವೆಲ್ ಮತ್ತು ಶ್ರೀಕಾಂತ್ ಶೆಟ್ಟಿಯಂತಹ ದುಷ್ಕರ್ಮಿಗಳು ಗಲಭೆಗೆ ಪ್ರಚೋದನೆ ನೀಡುತ್ತಿದ್ದರೂ, ಅವರು ಸ್ವಚ್ಛಂದವಾಗಿ ತಿರುಗಾಡುತ್ತಿದ್ದಾರೆ. ಇಂತಹ ವ್ಯಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿರುವುದು ಸರ್ಕಾರದ ವಿಫಲತೆಯನ್ನು ಸೂಚಿಸುತ್ತದೆ.
ಶರಣ್ ಪಂಪ್‌ವೆಲ್‌ನಂತಹ ದುಷ್ಕರ್ಮಿಗಳ ಮೇಲೆ ಪ್ರಕರಣ ದಾಖಲಾದರೂ, ಎರಡೇ ನಿಮಿಷಗಳಲ್ಲಿ ಮ್ಯಾಲಿ ತಯಾರು ಮಾಡುವಂತೆ ಜಾಮೀನು ದೊರೆಯುವಂತಹ ವ್ಯವಸ್ಥೆಯಿಂದ ಸಾಮಾನ್ಯ ಜನರಲ್ಲಿ ನ್ಯಾಯದ ಮೇಲಿನ ನಂಬಿಕೆ ಕಡಿಮೆಯಾಗಿದೆ. ಇದು ಕಾನೂನಿನ ದುರ್ಬಳಕೆಯನ್ನು ತೋರಿಸುತ್ತದೆ ಮತ್ತು ಸರ್ಕಾರದ ಕಾನೂನು ಜಾರಿ ವ್ಯವಸ್ಥೆಯ ದೌರ್ಬಲ್ಯವನ್ನು ಬಯಲಿಗೆಳೆಯುತ್ತದೆ. ಕರಾವಳಿಯಲ್ಲಿ ಕೋಮುವಾದಿ ಶಕ್ತಿಗಳ ಹಾವಳಿಯಿಂದ ದಿನಗೂಲಿ ಕಾರ್ಮಿಕರು ಮತ್ತು ಅಮಾಯಕ ನಾಗರಿಕರು ಭಯದಿಂದ ಬದುಕುವಂತಾಗಿದೆ ಎಂದು ತನ್ನ ಅಳಲು ವ್ಯಕ್ತಪಡಿಸಿದ್ದಾರೆ.
ಪತ್ರದಲ್ಲೇನಿದೆ:
ನಾನು, ಸಮದ್ ವಿಟ್ಲ , ವಿಟ್ಲ ಉಪ್ಪಿನಂಗಡಿ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್‌ನ ಅಧ್ಯಕ್ಷನಾಗಿ ಸೇವೆ ಸಲ್ಲಿಸುತ್ತಿದ್ದವನು. ಆದರೆ, ಇಂದು ತೀವ್ರ ನಿರಾಸೆ ಮತ್ತು ಬೇಸರದಿಂದ ನನ್ನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವುದಾಗಿ ಘೋಷಿಸುತ್ತಿದ್ದೇನೆ. ಬಂಟ್ವಾಳದ ಕೊಲ್ತಮಜಲುನಲ್ಲಿ ಅಮಾಯಕ ಮುಸ್ಲಿಂ ಯುವಕ ಅಬ್ದುಲ್ ರಹೀಂ ಅವರ ಕೊಲೆಯಂತಹ ದುರಂತದ ಘಟನೆಯು ಕಾಂಗ್ರೆಸ್ ಸರ್ಕಾರದ ಬೇಜವಾಬ್ದಾರಿತನ ಮತ್ತು ನಿಷ್ಕ್ರಿಯತೆಯಿಂದಾಗಿ ಸಂಭವಿಸಿದೆ ಎಂಬುದು ನನಗೆ ತೀವ್ರ ಕಳವಳಕಾರಿಯಾಗಿದೆ. ಈ ಘಟನೆಯಿಂದ ಕಾಂಗ್ರೆಸ್ ಕಾರ್ಯಕರ್ತರಿಗೆ ಮುಜುಗರವಾಗಿದ್ದು, ಜನರಲ್ಲಿ ಪಕ್ಷದ ವಿಶ್ವಾಸಾರ್ಹತೆ ಕುಸಿದಿದೆ.
ಕಾಂಗ್ರೆಸ್ ಸರ್ಕಾರದ ವಿಫಲತೆಯಿಂದಾಗಿ ಕರಾವಳಿಯಲ್ಲಿ ಕೋಮುವಾದಿ ಶಕ್ತಿಗಳನ್ನು ನಿಯಂತ್ರಿಸಲು ಯಾವುದೇ ತೀವ್ರ ಕ್ರಮ ಕೈಗೊಳ್ಳಲಾಗಿಲ್ಲ. ಎರಡು ವರ್ಷಗಳಿಂದ ಅಧಿಕಾರದಲ್ಲಿರುವ ಸರ್ಕಾರವು ಕೋಮುವಾದಿಗಳ ಹೆಡೆಮುರಿಯನ್ನು ಕಟ್ಟಿಹಾಕಲು ಯಾವುದೇ ಪರಿಣಾಮಕಾರಿ ಕೆಲಸ ಮಾಡಿಲ್ಲ, ಇದರಿಂದ ಜನರಲ್ಲಿ ತೀವ್ರ ಅಸಮಾಧಾನ ಮೂಡಿದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ನಿಷ್ಕ್ರಿಯ ಆಡಳಿತವು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ. ಇದರಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘದಂತಹ ಸಂಘಟನೆಗಳ ಗೂಂಡಾಗಳಿಗೆ ಮುಕ್ತ ಚಲನೆಯ ಸ್ವಾತಂತ್ರ್ಯ ದೊರೆತಂತಾಗಿದೆ, ಇದು ಸರ್ಕಾರದ ದೌರ್ಬಲ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನಿರ್ಲಕ್ಷ್ಯದ ಧೋರಣೆಯೂ ಜನರಲ್ಲಿ ಅಸಮಾಧಾನವನ್ನು ತಂದಿದೆ. .
ಸಂಘಪರಿವಾರದ ರೌಡಿಗಳನ್ನು ಎದುರಿಸಲು ಕಾಂಗ್ರೆಸ್ ಸರ್ಕಾರಕ್ಕೆ ಯಾವುದೇ ರಾಜಕೀಯ ಇಚ್ಛಾಶಕ್ತಿ ಇಲ್ಲವೆಂದು ತೋರುತ್ತಿದೆ. ಇದರಿಂದ ಜನರು ಸರ್ಕಾರದ ಮೇಲಿನ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ, ಮತ್ತು ಕಾಂಗ್ರೆಸ್ ಕಾರ್ಯಕರ್ತರಿಗೆ ಜನರ ಮುಂದೆ ತಲೆ ಎತ್ತಿಕೊಂಡು ನಿಲ್ಲಲು ಕಷ್ಟವಾಗಿದೆ.
ಈ ಎಲ್ಲಾ ಕಾರಣಗಳಿಂದಾಗಿ, ಕಾಂಗ್ರೆಸ್ ಸರ್ಕಾರದ ಈಗಿನ ಆಡಳಿತದ ನೀತಿಗಳೊಂದಿಗೆ ಒಪ್ಪಿಕೊಳ್ಳಲು ನನಗೆ ಸಾಧ್ಯವಿಲ್ಲ. ಜನರಲ್ಲಿ ಕಾಂಗ್ರೆಸ್ ಪಕ್ಷದ ವಿಶ್ವಾಸವನ್ನು ಮರಳಿ ಗಳಿಸಲು ಗಟ್ಟಿ ನಿರ್ಧಾರಗಳು ಅಗತ್ಯವಾಗಿವೆ. ಆದರೆ, ಪ್ರಸ್ತುತ ಸ್ಥಿತಿಯಲ್ಲಿ, ಯುವ ಕಾಂಗ್ರೆಸ್‌ನ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ನನಗೆ ಆಸಕ್ತಿಯಿಲ್ಲ. ಆದ್ದರಿಂದ, ಈ ಸ್ಥಾನದಿಂದ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ನನ್ನೊಂದಿಗೆ ಹಲವು ಯುವ ಕಾಂಗ್ರೆಸ್ ಕಾರ್ಯಕರ್ತರು ಕೂಡಾ ರಾಜೀನಾಮೆ ನೀಡುತ್ತಿದ್ದಾರೆ.




