ಡಬಲ್ ಡೆಕ್ಕರ್ ಬಸ್ ಬೆಂಕಿಗಾಹುತಿ: ಇಬ್ಬರು ಮಕ್ಕಳು ಸಹಿತ ಐವರು ಮೃತ್ಯು
ಲಕ್ನೋ: ಡಬಲ್ ಡೆಕ್ಕರ್ ಬಸ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಇಬ್ಬರು ಮಕ್ಕಳು ಸೇರಿದಂತೆ ಐವರು ಸಾವನ್ನಪ್ಪಿರುವ ದುರ್ಘಟನೆ ಲಕ್ನೋದ ಕಿಸಾನ್ ಪಾತ್ನಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರದಿಂದ ದೆಹಲಿಗೆ ತೆರಳುತ್ತಿದ್ದ ಬಸ್‌ನಲ್ಲಿ ಈ ಅಗ್ನಿ ಅವಘಡ ನಡೆದಿದ್ದು, ಬೆಂಕಿ ಆರಿಸಲು ಅಗ್ನಿಶಾಮಕ ದಳದಿಂದ ಪ್ರಯತ್ನ ನಡೆದಿದೆ.
ಘಟನೆ ಕುರಿತು ಮಾತನಾಡಿದ ಉಪ ಪೊಲೀಸ್ ಆಯುಕ್ತ ನಿಪುನ್ ಅಗರ್ವಾಲ್, ಬಿಹಾರದ ಬೇಗುಸರಾಯ್ನಿಂದ ದೆಹಲಿಗೆ ತೆರಳುತ್ತಿದ್ದ ಖಾಸಗಿ ಸ್ಲೀಪರ್ ಬಸ್‌ನಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. ಬಸ್‌ನಲ್ಲಿ 60 ರಿಂದ 70 ಮಂದಿ ಪ್ರಯಾಣಿಕರಿದ್ದರು. ಹಲವರನ್ನು ರಕ್ಷಣೆ ಮಾಡಲಾಗಿದೆ. ಆದರೆ, ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಹಾಗೂ ಓರ್ವ ಪುರುಷ ಬೆಂಕಿಗೆ ಆಹುತಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.





