ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿಯ ವಿವಾದಿತ ಭಾಷಣದ ವಿರುದ್ಧ ಕುವೆಟ್ಟು ವ್ಯಾಪ್ತಿಯ ವಿವಿಧ ಮಸೀದಿಗಳ ಸಮಿತಿ ವತಿಯಿಂದ ದೂರು ದಾಖಲು
ಬೆಳ್ತಂಗಡಿ: ಇತ್ತೀಚೆಗೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಡೆದ ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿಯ ವಿವಾದಾತ್ಮಕ ಭಾಷಣದ ವಿರುದ್ಧ ಕುವೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಗುರುವಾಯನಕೆರೆ, ಸುನ್ನತ್ ಕೆರೆ, ಬದ್ಯಾರ್ ಹಾಗೂ ಮದ್ದಡ್ಕ ಮಸೀದಿಗಳ ಅಧ್ಯಕ್ಷರು, ಪದಾಧಿಕಾರಿಗಳು, ಹಾಗೂ ಸರ್ವ ಜಮಾಅತರ ಪರವಾಗಿ ಬೆಳ್ತಂಗಡಿ ಆರಕ್ಷಕ ಠಾಣಾಧಿಕಾರಿಗಳಿಗೆ ದೂರು ಸಲ್ಲಿಸಲಾಯಿತು.
ದೂರಿನಲ್ಲಿ ಇಂತಹ ಕೋಮು ಪ್ರಚೋದಿತ ಭಾಷಣಗಳಿಂದ ಶಾಂತಿಯಲ್ಲಿರುವ ಸಮಾಜಲ್ಲಿ ಕೋಮು ವೈಷಮ್ಯ ಮತ್ತು ಯುವ ಸಮೂಹ ಉದ್ರಿಕ್ತವಾಗುವ ಸಾಧ್ಯತೆಯಿದೆ. ಆದುದರಿಂದ ಇಂತಹ ಘಟನೆಗಳು ಮರುಕಳಿಸದಿರಲು ಆಪಾದಿತರ ವಿರುದ್ದ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಮಾನ್ಯ ಠಾಣಾಧಿಕಾರಿಗಳಿಗೆ ಎಲ್ಲಾ ಜಮಾಅತ್ ಮುಖಂಡರುಗಳು ವಿನಂತಿಸಿದರು.
ಈ ಸಂದರ್ಭದಲ್ಲಿ ಗುರುವಾಯನಕೆರೆ ಮಸೀದಿ ಅಧ್ಯಕ್ಷರಾದ ಹಾಜಿ ಅಬ್ದುಲ್ ಲತೀಫ್, ಸುನ್ನತ್ ಕೆರೆ ಮಸೀದಿ ಅಧ್ಯಕ್ಷರಾದ ಹಾಜಿ ಅಬ್ದುಲ್ ರಹಿಮಾನ್, ಬದ್ಯಾರ್ ಮಸೀದಿ ಅಧ್ಯಕ್ಷರಾದ ಕಾಸಿಂ ಬದ್ಯಾರ್, ಮದ್ದಡ್ಕ ಮಸೀದಿ ಅಧ್ಯಕ್ಷರಾದ ಅಶ್ರಫ್ ಚಿಲಿಂಬಿ ಹಾಗೂ ಎಲ್ಲಾ ಮಸೀದಿಗಳ ಕಾರ್ಯಕಾರಿ ಸಮಿತಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.





