13 ವರ್ಷದ ಬಾಲಕನಿಂದ ತನ್ನ ಸ್ನೇಹಿತನಿಗೆ ಚಾಕುವಿನಿಂದ ಇರಿದು ಹತ್ಯೆ: ರಾಜ್ಯದಲ್ಲಿ ನಡೆದ ಹೃದಯ ವಿದ್ರಾವಕ ಘಟನೆ
ಹುಬ್ಬಳ್ಳಿ: ಕ್ಷುಲ್ಲಕ ವಿಷಯವಾಗಿ ಅಪ್ರಾಪ್ತ ಸ್ನೇಹಿತರಿಬ್ಬರ ನಡುವೆ ಜಗಳ ಉಂಟಾಗಿ ವಿಕೋಪಕ್ಕೆ ಹೋದಾಗ ಓರ್ವನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಸೋಮವಾರ ರಾತ್ರಿ ಮೂರುಸಾವಿರ ಮಠ ಬಳಿಯ ಗುರುಸಿದ್ದೇಶ್ವರ ನಗರದಲ್ಲಿ ನಡೆದಿದೆ.
13 ವರ್ಷದ ಬಾಲಕನೊಬ್ಬ ತನ್ನ ಸ್ನೇಹಿತನಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದು, ಚೇತನ್ (12) ಹತ್ಯೆಯಾದ ಬಾಲಕ ಎಂದು ತಿಳಿದು ಬಂದಿದೆ. ಇಂದು (ಮೇ 12) ಸಂಜೆ ಡಿಜೆ ಮತ್ತು ಲೈಟಿಂಗ್ ವಿಷಯಕ್ಕೆ ಸಂಬಂಧಿಸಿ ಅಪ್ರಾಪ್ತ ಸ್ನೇಹಿತರ ನಡುವೆ ಜಗಳವಾಗಿದೆ.
ಈ ಜಗಳದಲ್ಲಿ 13 ವರ್ಷದ ಬಾಲಕ ಚೇತನ್‌ಗೆ ಚಾಕುವಿನಿಂದ ಇರಿದಿದ್ದಾನೆ ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡ ಚೇತನ್ ನನ್ನು ಹುಬ್ಬಳ್ಳಿ ಕಿಮ್ಸ್‌ಗೆ ರವಾನಿಸಲಾಗಿದೆ. ಆದರೆ, ಮಾರ್ಗ ಮಧ್ಯದಲ್ಲಿ ಬಾಲಕ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಹುಬ್ಬಳ್ಳಿಯ ಕಮರಿಪೇಟ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಅವರು, “ಗುರುಸಿದ್ದೇಶ್ವರ ನಗರದಲ್ಲಿ ಬಾಲಕರಿಬ್ಬರ ನಡುವೆ ಜಗಳ ಆರಂಭವಾಗಿದೆ. ಈ ವೇಳೆ ಓರ್ವ ಬಾಲಕ ಮನೆಗೆ ಹೋಗಿ ಚಾಕು ತಂದು ಇನ್ನೊಬ್ಬನಿಗೆ ಇರಿದಿದ್ದಾನೆ. ಕೂಡಲೇ ಇರಿದ ಬಾಲಕನ ತಾಯಿ ಇರಿತಕ್ಕೊಳಗಾದ ಬಾಲಕನ್ನು ಆಸ್ಪತ್ರೆಗೆ ಕರೆತಂದಿದ್ದಾಳೆ. ಕಿಮ್ಸ್ ಗೆ ಕರೆ ತಂದಾಗ ಬಾಲಕ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಇದು ಹೃದಯ ವಿದ್ರಾವಕ ಘಟನೆ” ಎಂದು ಹೇಳಿದರು




