March 12, 2026

ರೌಡಿಶೀಟರ್ ಸಂತೋಷ್ ಕೊಲೆ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು

0
image_editor_output_image-447122378-1746641379872

ದಾವಣಗೆರೆ: ಕುಖ್ಯಾತ ರೌಡಿಶೀಟರ್ ಸಂತೋಷ್ ಕುಮಾರ್ ಅಲಿಯಾಸ್ ಕಣುಮ ಕೊಲೆ ಪ್ರಕರಣದ ಆರೋಪಿಯೋರ್ವ ಪೊಲೀಸರಿಂದ ತಪ್ಪಿಸಿಕೊಳ್ಳುವ ಸಂದರ್ಭದಲ್ಲಿ ಕಾಲಿಗೆ ಗುಂಡು ಹೊಡೆದು ವಶಕ್ಕೆ ಪಡೆಯಲಾಗಿದೆ.

ಸೋಮವಾರ ಸಂಜೆ ಹದಡಿ ರಸ್ತೆಯ ರಿಕ್ರಿಯೇಷನ್ ಕ್ಲಬ್ ನಲ್ಲಿ ರೌಡಿಶೀಟರ್ ಕಣಮ ಅಲಿಯಾಸ್ ಸಂತೋಷ್ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ಚಾವಳಿ ಸಂತೋಷ್ ನನ್ನು ಪಂಚನಾಮೆಗಾಗಿ ಬುಧವಾರ ಸಂಜೆ ಆವರಗೆರೆ ಸಮೀಪ ಕರೆದೊಯ್ಯಲಾಗಿತ್ತು.

ಪಂಚನಾಮೆ ನಡೆಸುತ್ತಿದ್ದಾಗ ಚಾವಳಿ ಸಂತೋಷ್ ಪೊಲೀಸರ ಮೇಲೆಯೇ ದಾಳಿ ನಡೆಸಿ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ ಪೊಲೀಸರು ಮೊದಲು ಗಾಳಿಯಲ್ಲಿ ಗುಂಡು ಹೊಡೆದಿದ್ದಾರೆ. ಆದರೂ, ತಪ್ಪಿಸಿಕೊಳ್ಳಲು ಮುಂದಾದಾಗ ನಗರ ಪೊಲೀಸ್ ಉಪಾಧೀಕ್ಷಕ ಶರಣ ಬಸವೇಶ್ವರ ಚಾವಳಿ ಸಂತೋಷ್ ಕಾಲಿಗೆ ಗುಂಡು ಹೊಡೆದಿದ್ದಾರೆ.

ಈ ಗಲಾಟೆಯಲ್ಲಿ ನಗರ ಪೊಲೀಸ್ ಉಪಾಧೀಕ್ಷಕ ಶರಣ ಬಸವೇಶ್ವರ, ವಿದ್ಯಾನಗರ ಪೇದೆ ಭೋಜಪ್ಪ ಗಾಯ ಗೊಂಡಿದ್ದಾರೆ. ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಂಗಳವಾರ ಸಂಜೆ ಹತ್ತು ಜನ ಆರೋಪಿ ಗಳು ಹೊಳಲ್ಕೆರೆಯಲ್ಲಿ ಪೊಲೀಸರ ಮುಂದೆ ಶರಣಾಗಿದ್ದರು. ಮತ್ತೊಬ್ಬ ಆರೋಪಿ ಚಾವಳಿ ಸಂತೋಷ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ಆವರಗೆರೆ ಬಳಿ ಮೊಬೈಲ್ ಬಿಸಾಕಲಾಗಿದೆ ಎಂದು ನೀಡಿದ್ದ ಮಾಹಿತಿಯಂತೆ ಪಂಚನಾಮೆಗಾಗಿ ತೆರಳಿದ್ದಾಗ ಈ ಘಟನೆ ನಡೆದಿದೆ.

Leave a Reply

Your email address will not be published. Required fields are marked *

error: Content is protected !!