ಮಾಣಿ: ಹಿಂದೂ ರುದ್ರಭೂಮಿ ಲೋಕಾರ್ಪಣೆ: ರುದ್ರಭೂಮಿ ಮೂಲಭೂತ ಸೌಕರ್ಯದ ಭಾಗವಾಗಿದೆ: ಚಂದ್ರಪ್ರಕಾಶ್ ಶೆಟ್ಟಿ ತುಂಬೆ
ವಿಟ್ಲ: ಹುಟ್ಟು ಅಕಸ್ಮಿಕ ಸಾವು ನಿಶ್ಚಿತ. ಹುಟ್ಟು ಸಾವಿನ ಮಧ್ಯೆ ನಾವು ಮಾಡಿದ ಪುಣ್ಯದ ಕೆಲಸ ನಮ್ಮನ್ನು ಕಾಪಾಡುತ್ತದೆ. ಇದೂ ಒಂದು ಮೂಲಭೂತ ಸೌಕರ್ಯದ ಭಾಗವಾಗಿದೆ. ಈಗಿನ ಕಾಲಘಟ್ಟದಲ್ಲಿ ರುದ್ರಭೂಮಿಯ ಅವಶ್ಯಕತೆ ಬಹಳಷ್ಟಿದೆ.
ಎಂದು ಮಾಜಿ ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆರವರು ಹೇಳಿದರು.
ಅವರು ಮೇ. ೬ ರಂದು ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಲಕ್ಕಪ್ಪಕೋಡಿ ಎಂಬಲ್ಲಿ ಗ್ರಾಮ ಪಂಚಾಯತ್ ವತಿಯಿಂದ ನೂತನವಾಗಿ ನಿರ್ಮಿಸಿದ ಹಿಂದೂ ರುದ್ರಭೂಮಿಯ ಲೋಕಾರ್ಪಣೆ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಂಟ್ವಾಳ ತಹಶೀಲ್ದಾರ್ ಅರ್ಚನಾ ಭಟ್ ರವರು ಮಾತನಾಡಿ ಹುಟ್ಟು ಸಾವಿನಲ್ಲಿ ಘನತೆ ಗೌರವವಿರಬೇಕು. ಈ ನಿಟ್ಟಿನಲ್ಲಿ ಈ ಒಂದು ಹಿಂದೂ ರುದ್ರಭೂಮಿ ನಿರ್ಮಾಣ ಉತ್ತಮ ಬೆಳವಣಿಗೆಯಾಗಿದೆ. ಗ್ರಾಮದ ಜನರ ಉದ್ದೇಶ ಈಡೇರಿದಂತಾಗಿದೆ. ಮಾಡುವಂತಹ ಛಲ ನಮ್ಮಲ್ಲಿರಬೇಕು. ಒಮ್ಮತದ ಮನಸ್ಸು ಇದ್ದೆಡೆ ಎಲ್ಲಾ ಕೆಲಸಗಳಲ್ಲಿ ಯಶಸ್ವಿ ಸಾಧ್ಯ ಎಂದರು.
ಹಿಂದೂ ರುದ್ರಭೂಮಿಯ ಅಧ್ಯಕ್ಷರಾದ ಪ್ರಫುಲ್ಲ ಆರ್ ರೈ ಕಲ್ಲಾಜೆಗುತ್ತುರವರು ರುದ್ರಭೂಮಿಯನ್ನು ದೀಪಬೆಳಗಿಸಿ ಉದ್ಘಾಟಿಸಿದರು.
ಮಾಣಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುದೀಪ್ ಕುಮಾರ್ ಶೆಟ್ಟಿ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಾವಿಂದು ನಿರಾಳರಾಗಿದ್ದೇವೆ. ನಾವು ಆಡಳಿತಕ್ಕೆ ಬಂದ ದಿನದಿಂದ ಮೂಲಭೂತ ಸೌಕರ್ಯಗಳಿಗೆ ಮೊದಲ ಆಧ್ಯತೆ ನೀಡುತ್ತಾ ಬಂದಿದ್ದೇವೆ. ಅದರಂತೆ ರುದ್ರಭೂಮಿ ನಿರ್ಮಾಣಕ್ಕೆ ಚಾಲನೆ ನೀಡಿದೆವು. ಇದೀಗ ಎಲ್ಲರ ಪ್ರಯತ್ನದ ಫಲವಾಗಿ ಸುಸಜ್ಜಿತವಾದ ಹಿಂದೂ ರುದ್ರಭೂಮಿ ನಿರ್ಮಾಣಗೊಂಡು ಇಂದು ಲೋಕಾರ್ಪಣೆಗೊಂಡಿದೆ. ಕೇಂದ್ರ, ರಾಜ್ಯ ಸರಕಾರದ ಯಾವುದೇ ಹಣ ಈ ಒಂದು ರುದ್ರಭೂಮಿಗೆ ಬಳಕೆಯಾಗಿಲ್ಲ. ದಾನಿಗಳ ಸಹಕಾರದಿಂದಾಗಿ ಇಷ್ಟೊಂದು ಸುಂದರ ರುದ್ರಭೂಮಿ ನಿರ್ಮಾಣಗೊಂಡಿದೆ. ರುದ್ರಭೂಮಿಗೆ ಮೃತದೇಹವನ್ನು ತರಲು ಇತರ ಕಡೆಗಳಿಂದ ವಾಹನವನ್ನು ತರಿಸಬೇಕಾದ ಸನ್ನಿವೇಶ ಇಲ್ಲಿದೆ. ಈ ನಿಟ್ಟಿನಲ್ಲಿ
ಮುಂದಿನ ದಿನಗಳಲ್ಲಿ ಮೃತದೇಹ ಸಾಗಿಸಲು ಆ್ಯಂಬುಲೆನ್ಸ್ ಸೇವೆಯನ್ನು ನೀಡುವ ಯೋಚನೆ ಮಾಡಲಾಗಿದ್ದು, ಬಡವರಿಗೆ ಉಚಿತ ಸೇವೆ ನೀಡುವ ಬಗ್ಗೆ ಯೋಜನೆ ರೂಪಿಸಲಾಗಿದೆ ಎಂದರು.
ವೇದಿಕೆಯಲ್ಲಿ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ತಾರನಾಥ ಸಾಲ್ಯಾನ್, ಬಂಟ್ವಾಳ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬೇಬಿ ಕುಂದರ್ , ಅಮ್ಮುಂಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದಚಂದ್ರಶೇಖರ ಭಂಡಾರಿ ಅಮ್ಮುಂಜೆ,
ರುದ್ರಭೂಮಿ ನಿರ್ಮಾಣ ಸಮಿತಿ ಕಾರ್ಯಧ್ಯಕ್ಷರಾದ ಜಗನ್ನಾಥ ಚೌಟ ಬದಿಗುಡ್ಡೆ, ಶ್ರೀಕ್ಷೇತ್ರ ಗ್ರಾಮಾಭಿವೃದ್ಧಿ
ಯೋಜನೆಯ ಮಾಣಿ ವಲಯ ಮೇಲ್ವಿಚಾರಕರಾದ ಆಶಾಪಾರ್ವತಿ, ಮಾಣಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಿರಿಜಾ, ಉಪಾಧ್ಯಕ್ಷರಾದ ಸುಜಾತಾ, ಮಾಣಿ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷರಾದ ಇಬ್ರಾಹಿಂ ಕೆ. ಮಾಣಿ, ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಶಿಕಲಾ,
ಮೆಸ್ಕಾಂ ಅಭಿಯಂತರಾದ ಪ್ರಸಾದ್,
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಚಂದ್ರಾವತಿ ಮೊದಲಾದವರು ಉಪಸ್ಥಿತರಿದ್ದರು.
ಮಾಣಿ ಸರಕಾರಿ ಹಿ.ಪ್ರಾ ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಮಾಣಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಾಲಕೃಷ್ಣ ಆಳ್ವ ಕೊಡಾಜೆರವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿ,ವಂದಿಸಿದರು.




