ಪಹಲ್ಗಾಮ್ ಉಗ್ರರ ದಾಳಿ ಪ್ರಕರಣ: ಭಾರತಕ್ಕೆ ಪಾಕಿಸ್ತಾನಿ ಪ್ರಜೆಗಳಿಗೆ ಪ್ರವೇಶವಿಲ್ಲ, ಪಾಕಿಸ್ತಾನೀಯರ ವೀಸಾ ರದ್ದು
ನವದೆಹಲಿ: ಪಹಲ್ಗಾಮ್ ಉಗ್ರರ ದಾಳಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸದಲ್ಲಿ ಇಂದು ಭದ್ರತೆ ಕುರಿತ ಸಂಪುಟ ಸಮಿತಿ (ಸಿಸಿಎಸ್) ಸಭೆ ನಡೆದಿದೆ.
ಈ ಸಭೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರ ಹಿರಿಯ ಸಚಿವರು ಭಾಗವಹಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತದ ಕಾರ್ಯತಂತ್ರದ ಬಗ್ಗೆ ಈ ಸಭೆಯಲ್ಲಿ ಚರ್ಚಿಸಲಾಗಿದ್ದು, ಪಾಕಿಸ್ತಾನಿಯರಿಗೆ ಭಾರತ ಪ್ರವೇಶ ನಿಷೇಧ ಮಾಡಲಾಗಿದೆ.
ಇಂದು ನಡೆದ ಸಭೆಯಲ್ಲಿ ಭಾರತ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಅಟ್ಟಾರಿ ಚೆಕ್ ಪೋಸ್ಟ್ ಮುಚ್ಚಲಾಗುವುದು, ಸಿಂಧೂ ಜಲ ಒಪ್ಪಂದವನ್ನು ತಕ್ಷಣವೇ ಸ್ಥಗಿತಗೊಳಿಸಲಾಗುವುದು ಎಂದು ವಿದೇಶಾಂಗ ಸಚಿವಾಲಯ ಖಚಿತಪಡಿಸಿದೆ.
ಸಭೆಯಲ್ಲಿ ಮೋದಿ ಸರ್ಕಾರ ತೆಗೆದುಕೊಂಡ ನಿರ್ಧಾರಗಳು:
– ಸಿಂಧೂ ಜಲ ಒಪ್ಪಂದ ಸ್ಥಗಿತಗೊಳಿಸಲಾಗುವುದು.
– ಅಟ್ಟಾರಿ-ವಾಘಾ ಗಡಿಯ ಚೆಕ್ ಪೋಸ್ಟ್ ಅನ್ನು ತಕ್ಷಣ ಮುಚ್ಚಲಾಗುವುದು.
– ಭಾರತಕ್ಕೆ ಪಾಕಿಸ್ತಾನಿ ಪ್ರಜೆಗಳಿಗೆ ಪ್ರವೇಶವಿಲ್ಲ, ಪಾಕಿಸ್ತಾನೀಯರಿಗೆ ವೀಸಾ ನೀಡುವುದಿಲ್ಲ. ಈಗಾಗಲೇ ಭಾರತಕ್ಕೆ ಬಂದಿರುವ ಯಾವುದೇ ಪಾಕಿಸ್ತಾನಿ ಪ್ರಜೆಗೆ ಭಾರತವನ್ನು ತೊರೆಯಲು 48 ಗಂಟೆಗಳ ಕಾಲಾವಕಾಶವಿದೆ.
– ಪಾಕಿಸ್ತಾನ ಹೈಕಮಿಷನ್ ಬಲವನ್ನು 30ಕ್ಕೆ ಇಳಿಸಲಾಗಿದೆ.
– ನವದೆಹಲಿಯಲ್ಲಿರುವ ಪಾಕಿಸ್ತಾನಿ ಹೈಕಮಿಷನ್‌ನಲ್ಲಿರುವ ರಕ್ಷಣಾ, ಮಿಲಿಟರಿ, ನೌಕಾ ಮತ್ತು ವಾಯು ಸಲಹೆಗಾರರನ್ನು ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲಾಗಿದೆ. ಅವರು ಭಾರತವನ್ನು ಬಿಡಲು ಒಂದು ವಾರ ಸಮಯ ನೀಡಲಾಗಿದೆ.
– ಭಾರತವು ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್‌ನ ರಕ್ಷಣಾ, ನೌಕಾಪಡೆ ಮತ್ತು ವಾಯು ಸಲಹೆಗಾರರನ್ನು ವಾಪಾಸ್ ಕರೆಸಿಕೊಳ್ಳಲಿದೆ. ಆಯಾ ಹೈಕಮಿಷನ್‌ಗಳಲ್ಲಿನ ಈ ಹುದ್ದೆಗಳನ್ನು ರದ್ದುಗೊಳಿಸಲಾಗಿದೆ.





