ಮಲ್ಪೆ: ಶೌಚಾಲಯದಲ್ಲಿ ನವಜಾತು ಶಿಶುವಿವ ಮೃತದೇಹ ಪತ್ತೆ ಪ್ರಕರಣ: ಮಗುವಿನ ತಾಯಿಯ ಪತ್ತೆ- ಆಕೆ ವಿರುದ್ಧ ಕಠಿಣ ಕ್ರಮ: ಎಸ್ಪಿ
ಉಡುಪಿ: ಮಲ್ಪೆ ಮಸೀದಿಯ ಕಾಂಪ್ಲೆಕ್ಸ್’ನ ಶೌಚಾಲಯದಲ್ಲಿ ನವಜಾತ ಶಿಶುವಿನ ಮೃತದೇಹ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ಮಗುವಿನ ತಾಯಿಯನ್ನು ಪತ್ತೆ ಹಚ್ಚಲಾಗಿದ್ದು, ಆಕೆಯ ವಿರುದ್ಧ ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ.ಕೆ.ಅರುಣ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಮಲ್ಪೆ ಜಂಕ್ಷನ್‌ನಲ್ಲಿರುವ ಜಾಮೀಯ ಮಸೀದಿಯ ಬಳಿಯ ಮಸೀದಿಗೆ ಸಂಬಂಧಿಸಿದ ಕಟ್ಟಡದಲ್ಲಿರುವ ಶೌಚಾಲಯದಲ್ಲಿ ಎ.14ರಂದು ನವಜಾತ ಶಿಶುವಿನ ಮೃತದೇಹ ಪತ್ತೆಯಾಗಿದ್ದು, ಶೌಚಾಲಯದ ಒಳಗಿನ ಗೋಡೆಯ ಮೇಲೆ ರಕ್ತದ ಕಲೆಗಳು ಇರುವುದು ಕಂಡು ಬಂದಿತ್ತು. ಈ ಬಗ್ಗೆ ಮಸೀದಿ ವತಿಯಿಂದ ನೀಡಿದ ದೂರಿನಂತೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದರು.
ಈ ಮಗುವಿನ ಮೃತದೇಹ ಎಲ್ಲಿಂದ ಬಂತು ಎಂದು ತನಿಖೆ ನಡೆಸಲಾಗಿದೆ. ಸ್ಥಳೀಯ ಯುವತಿ ಆಫ್ರಿನಾ ಅವರ ನವಜಾತ ಮಗುವಿನ ಮೃತದೇಹ ಎಂದು ಗೊತ್ತಾಗಿದೆ. ಆಫ್ರಿನಾಳಿಂದ ಸ್ವ ಇಚ್ಚಾ ಹೇಳಿಕೆ ಪಡೆಯಲಾಗಿದೆ. ಆಕೆ ತನ್ನದೇ ಮಗು ಎಂದು ಒಪ್ಪಿಕೊಂಡಿದ್ದಾಳೆ. ಏಳುವರೆ ಯಿಂದ ಎಂಟು ತಿಂಗಳು ನಡುವಯಸ್ಸಿನ ಭ್ರೂಣವಾಗಿದ್ದು ಯಾವುದೇ ಪ್ರೊಸೀಜರ್ ಇಲ್ಲದೆ ಅಬಾರ್ಷನ್ ಮಾಡಿಕೊಳ್ಳಲು ಪ್ರಯತ್ನಿಸಿದ್ದಾಳೆ ಎಂದರು.
ಏಕಾಏಕಿ ಹೊಟ್ಟೆ ನೋವು ಬಂದಿರುವುದರಿಂದ ಶೌಚಾಲಯಕ್ಕೆ ತೆರಳಿದ್ದಾಳೆ. ಶೌಚಾಲಯದಲ್ಲಿ ಮಗುವನ್ನು ಬಿಟ್ಟು ಹೋಗಿದ್ದಾಳೆ. ಸದ್ಯ ಆಫ್ರಿನಾ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆಸ್ಪತ್ರೆಯಿಂದ ಬಿಡುಗಡೆಯಾದ ನಂತರ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಕೆಲವೊಂದು ಅನುಮಾನಾಸ್ಪದ ಆಡಿಯೋಗಳು ವೈರಲ್ ಆಗಿದೆ. ಸುಳ್ಳು ಸುದ್ದಿ ಹಬ್ಬಿಸಿದವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.





