ಹಾಸನ: ನಗರಸಭೆ ಅಧ್ಯಕ್ಷ ಸ್ಥಾನ ಜೆಡಿಎಸ್ ತೆಕ್ಕೆಗೆ: ಹಾಸನದಲ್ಲಿ ಶುರುವಾಯಿತು ಅಧ್ಯಕ್ಷರ ಬದಲಾವಣೆಯ ಕೂಗು

ಹಾಸನ: ಜಿಲ್ಲಾ ಕೇಂದ್ರವಾಗಿರುವ ಹಾಸನದಲ್ಲಿ ಪ್ರಾಬಲ್ಯವನ್ನು ಉಳಿಸಿಕೊಂಡಿರುವ ಜೆಡಿಎಸ್, ನಗರಸಭೆಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಅಧ್ಯಕ್ಷ ಸ್ಥಾನವೂ ಜೆಡಿಎಸ್‌ಗೆ ದೊರಕಿದ್ದು, ಇದೀಗ ಅಧ್ಯಕ್ಷರ ಬದಲಾವಣೆಯ ಕೂಗು ಶುರುವಾಗಿದೆ.
ಆಗಸ್ಟ್‌ನಲ್ಲಿ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಎಂ.ಚಂದ್ರೇಗೌಡರನ್ನು ಬದಲಿಸಲು ಜೆಡಿಎಸ್ ವರಿಷ್ಠರು ಮುಂದಾಗಿದ್ದಾರೆ. ಅಧಿಕಾರ ಹಂಚಿಕೆ ಸೂತ್ರದಂತೆ 6 ತಿಂಗಳು ಚಂದ್ರೇಗೌಡರಿಗೆ ಅಧ್ಯಕ್ಷ ಸ್ಥಾನ ನೀಡಲಾಗಿತ್ತು. ಈಗ ರಾಜೀನಾಮೆ ನೀಡಬೇಕು. ಬೇರೆಯವರಿಗೆ ಅವಕಾಶ ಕೊಡಬೇಕು ಎನ್ನುವ ವಾದವನ್ನು ಜೆಡಿಎಸ್ ನಾಯಕರು ಮುಂದಿಟ್ಟಿದ್ದಾರೆ.
ಆದರೆ, ಕೇವಲ 6 ತಿಂಗಳಲ್ಲಿ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಅವಧಿ ಪೂರ್ಣಗೊಳಿಸಲು ಅವಕಾಶ ನೀಡಬೇಕು ಎನ್ನುವ ಬೇಡಿಕೆ ಚಂದ್ರೇಗೌಡರದ್ದು. ಆದರೆ, ಜಿಲ್ಲೆಯ ಜೆಡಿಎಸ್ ವರಿಷ್ಠರಾದ ಎಚ್.ಡಿ. ರೇವಣ್ಣ ಇದಕ್ಕೆ ಸೊಪ್ಪು ಹಾಕುತ್ತಿಲ್ಲ.
ಒಂದೆಡೆ ರಾಜೀನಾಮೆ ಕೊಡುವಂತೆ ವರಿಷ್ಠರು ಪಟ್ಟು ಹಿಡಿದಿದ್ದರೆ, ಇನ್ನೊಂದೆಡೆ ಅಧ್ಯಕ್ಷ ಸ್ಥಾನ ಬಿಟ್ಟು ಕೊಡುವುದಿಲ್ಲ ಎಂದು ಚಂದ್ರೇಗೌಡ ಹೇಳುತ್ತಿದ್ದು, ನಗರಸಭೆ ಅಧ್ಯಕ್ಷ ಸ್ಥಾನಕ್ಕೆ ಹಗ್ಗಜಗ್ಗಾಟ ಶುರುವಾಗಿದೆ.
ಹಾಸನ ನಗರಸಭೆಯಲ್ಲಿ ಒಟ್ಟು 35 ಸದಸ್ಯರಿದ್ದು, ಜೆಡಿಎಸ್ 17, ಬಿಜೆಪಿ 14, ಕಾಂಗ್ರೆಸ್ ಹಾಗೂ ಪಕ್ಷೇತರರು ತಲಾ ಇಬ್ಬರು ಸದಸ್ಯರಿದ್ದಾರೆ. ಜೊತೆಗೆ ಸ್ಥಳೀಯ ಶಾಸಕ ಸ್ವರೂಪ್ ಪ್ರಕಾಶ್ ಅವರ ಮತವೂ ಸೇರಲಿದ್ದು, ಜೆಡಿಎಸ್‌ಗೆ 18 ಮತಗಳು ಸಿಗಲಿವೆ. ಸ್ಪಷ್ಟ ಬಹುಮತ ಪಡೆದಿರುವ ಜೆಡಿಎಸ್, ಅಧ್ಯಕ್ಷ ಸ್ಥಾನಕ್ಕೆ ಬೇರೊಬ್ಬರನ್ನು ಆಯ್ಕೆ ಮಾಡಲು ಮುಂದಾಗಿದೆ.
ಪ್ರೀತಂ ಗೌಡರ ಆಟ ನಡೆದೀತೆ?: ಆಗಸ್ಟ್‌ನಲ್ಲಿ ನಡೆದ ನಗರಸಭೆ ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನದ ಚುನಾವಣೆಯ ವೇಳೆಯೇ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂಗೌಡರು, ಮೈತ್ರಿಯ ದಾಳ ಉರುಳಿಸಿದ್ದರು. ತಲಾ 10 ತಿಂಗಳು ಅಧ್ಯಕ್ಷ–ಉಪಾಧ್ಯಕ್ಷ ಸ್ಥಾನವನ್ನು ಉಭಯ ಪಕ್ಷಗಳು ಹಂಚಿಕೆ ಮಾಡಿಕೊಳ್ಳಬೇಕು ಎನ್ನುವ ವಾದ ಮುಂದಿಟ್ಟಿದ್ದರು.
ಆದರೆ, ಇದಕ್ಕೆ ಸೊಪ್ಪು ಹಾಕದ ಜೆಡಿಎಸ್ ನಾಯಕರು, ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್‌ನ ಎಂ. ಚಂದ್ರೇಗೌಡರನ್ನು ಆಯ್ಕೆ ಮಾಡಿದರೆ, ಜೆಡಿಎಸ್ ಜೊತೆ ಗುರುತಿಸಿಕೊಂಡಿರುವ ಬಿಜೆಪಿ ಸದಸ್ಯೆ ಲತಾ ಸುರೇಶ್ ಅವರನ್ನು ಉಪಾಧ್ಯಕ್ಷೆಯಾಗಿ ಆಯ್ಕೆ ಮಾಡಿದ್ದರು.
ಇದೀಗ ಅಧ್ಯಕ್ಷ ಸ್ಥಾನ ಬಿಡುವಂತೆ ಚಂದ್ರೇಗೌಡರಿಗೆ ಜೆಡಿಎಸ್ ನಾಯಕರು ತಾಕೀತು ಮಾಡಿದ್ದು, ಮತ್ತೊಮ್ಮೆ ಪ್ರೀತಂಗೌಡರ ಆಟ ನಡೆಯಲಿದೆಯೇ ಎನ್ನುವ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಜೆಡಿಎಸ್ ವರಿಷ್ಠರನ್ನು ಎದುರು ಹಾಕಿಕೊಂಡು, ಚಂದ್ರೇಗೌಡರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲು ಬಯಸಿದರೆ, ಬಿಜೆಪಿ ಸದಸ್ಯರು ಬೆಂಬಲ ನೀಡಲಿದ್ದಾರೆಯೇ ಎನ್ನುವ ಚರ್ಚೆಗಳು ನಡೆಯುತ್ತಿವೆ.