ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ:
ಸ್ವಯಂ ಘೋಷಿತ ‘ದೇವಮಾನವ’ನ ಬಂಧನ
ಚೆನ್ನೈ: ಅಪ್ರಾಪ್ತ ಬಾಲಕಿಯ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದ ಸ್ವಯಂ ಘೋಷಿತ ದೇವ ಮಾನವ ಹಾಗೂ ಸಹಕಾರ ನೀಡಿದ್ದ ಆತನ ಪತ್ನಿಯನ್ನು ಚೆನ್ನೈ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಾದ ಸತ್ಯನಾರಾಯಣನ್ ಹಾಗೂ ಆತನಿಗೆ ಕುಮ್ಮಕ್ಕು ನೀಡಿದ ಪತ್ನಿ ಪುಷ್ಪಲತಾ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ದಂಪತಿಗಳು ನಗರದಲ್ಲಿ ‘ಶಿರಡಿಪುರಂ ಸರ್ವ ಶಕ್ತಿ ಪೀಡಂ ಸಾಯಿಬಾಬಾ ಕೊಯಿಲ್’ ಎಂಬ ಪೂಜಾ ಸ್ಥಳವನ್ನು ಹೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
2016ರಲ್ಲಿ 16 ವರ್ಷದವಳಾಗಿದ್ದ ಸಂತ್ರಸ್ತೆಯನ್ನು ಆಕೆಯ ಅಜ್ಜಿ ಆಶ್ರಮಕ್ಕೆ ಕರೆದುಕೊಂಡು ಬಂದಿದ್ದರು. ಈ ವೇಳೆ ಪವಿತ್ರ ಬೂದಿ ಕೊಡುತ್ತೇನೆ ಸಂತ್ರಸ್ತೆಯನ್ನು ಪುಸಲಾಯಿಸಿ ಪುಷ್ಪಲತಾ ಆಶ್ರಮದ ಕೋಣೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಸಂತ್ರಸ್ತೆಗೆ ಕುಡಿಯಲು ಹಣ್ಣಿನ ರಸ ಕೊಟ್ಟಿದ್ದಾಳೆ. ಎರಡು ಗಂಟೆ ಬಳಿಕ ಪ್ರಜ್ಞೆ ಮರಳುವಾಗ ಯುವತಿ ನಗ್ನಾವಸ್ಥೆಯಲ್ಲಿದ್ದಳು. ಪಕ್ಕದಲ್ಲಿ ಸತ್ಯನಾರಾಯಣ ಹಾಗೂ ಇಬ್ಬರು ಗಂಡಸರು ಕೂಡ ವಿವಸ್ತ್ರರಾಗಿದ್ದಾರು’ ಎಂದು ಪೊಲೀಸರು ಘಟನೆ ಬಗ್ಗೆ ಮಾಹಿತಿ ನೀಡಿದ್ದಾರೆ.
ಅತ್ಯಾಚಾರ ನಡೆಸಿದ ಬಳಿಕ, ಆಕೆಯ ಪಾಪಗಳನ್ನು ತೊಡೆಯಲು ಮಾಡಲಾದ ಕ್ರೀಯೆ ಇದೆಂದೂ, ಯಾರ ಬಳಿಯಾದರೂ ಈ ವಿಷಯ ಬಾಯಿ ಬಿಡಬಾರದು ಎಂದೂ ಮೊಬೈಲ್‌ನಲ್ಲಿದ್ದ ಚಿತ್ರಗಳನ್ನು ತೋರಿಸಿ ಬೆದರಿಸಲಾಗಿತ್ತು. ಹೀಗಾಗಿ ಸಂತ್ರಸ್ತೆ ಈ ವಿಷಯವನ್ನು ಯಾರ ಬಳಿಯೂ ಹೇಳದೇ ಮುಚ್ಚಿಟ್ಟಿದ್ದಳು. ಇದಾದ ಬಳಿಕ 2018ರಲ್ಲಿ ನಗರದ ಹೊರ ವಲಯದಲ್ಲಿ, ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಯುವಕನೊಂದಿಗೆ ಆಕೆಗೆ ವಿವಾಹ ಕೂಡ ನಡೆದಿತ್ತು.
ಬಳಿಕ 2020ರಲ್ಲಿ ಆಕೆಯನ್ನು ಮತ್ತೆ ಪತ್ತೆ ಹಚ್ಚಿದ್ದ ಸತ್ಯ ನಾರಾಯಣ, ಆಕೆಯ ನಗ್ನ ಚಿತ್ರ ತೋರಿಸಿ, ಮತ್ತೆ ಆಶ್ರಮಕ್ಕೆ ಬರುವಂತೆ ಪೀಡಿಸಿದ್ದ. ಒಂದು ವೇಳೆ ಬರದೇ ಇದ್ದಲ್ಲಿ, ನಗ್ನ ಚಿತ್ರಗಳನ್ನು ಗಂಡನಿಗೆ ಕಳುಹಿಸುವುದಾಗಿಯೂ ಬೆದರಿಕೆ ಹಾಕಿದ್ದ. ಇದರಿಂದ ಹೆದರಿದ್ದ ಯುವತಿ ಆತನ ಆಶ್ರಮಕ್ಕೆ ಮತ್ತೆ ತೆರೆಳಿದ್ದಳು. ಅಲ್ಲಿ ಆಕೆಯ ಮೇಲೆ ಸತತವಾಗಿ ಅತ್ಯಾಚಾರ ನಡೆಸಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
2020 ಜುಲೈನಲ್ಲಿ ಆಕೆ ಗರ್ಭವತಿಯಾಗಿದ್ದು, ಗರ್ಭಪಾತ ಮಾಡಿಸಬೇಕು ಎಂದು ಸತ್ಯ ನಾರಾಯಣ ಹಾಗು ಆತನ ಪತ್ನಿ ಬೆದರಿಕೆ ಹಾಕಿದ್ದರು. ಈ ವೇಳೆ ಯುವತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಳು. ಅದೃಷ್ಠವಶಾತ್ ಆಕೆಯ ಅಜ್ಜಿಯ ಪ್ರಯತ್ನದಿಂದಾಗಿ ಬದುಕುಳಿದಿದ್ದಳು. ಈ ವರ್ಷ ಜನವರಿಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು.
ಇದೇ ನವೆಂಬರ್‌ನಲ್ಲಿ ವಿದೇಶದಿಂದ ಊರಿಗೆ ಬಂದ ಗಂಡನೊಂದಿಗೆ ಸಂತ್ರಸ್ತೆ ಎಲ್ಲಾ ವಿಚಾರಗಳನ್ನು ಹಂಚಿಕೊಂಡಿದ್ದು, ಪತಿ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತತ್ಸಬಂಧ ಸ್ವಯಂ ಘೋಷಿತ ದೇವ ಮಾನವ ಸತ್ಯ ನಾರಾಯಣ ಹಾಗೂ ಆತನ ಪತ್ನಿಯನ್ನು ಪೊಲೀಸರು ಬಂಧಿಸಿದ್ದಾರೆ. ಅವರ ಮೇಲೆ ಭಾರತೀಯ ದಂಡ ಸಂಹಿತೆ 328, 376, 506, 5 (f), 11ನೇ ವಿಧಿ ಹಾಗೂ ಪೋಕ್ಸೋ ಕಾಯ್ದೆಯ 17ನೇ ಸೆಕ್ಷನ್‌ಗಳಡಿ ದೂರು ದೂರು ದಾಖಲಾಗಿದೆ.
ಸತ್ಯ ನಾರಾಯಣನ್ ಅವರು ‘ಶಿರಡಿಪುರಂ ನಾನಾ ಬಾಬಾ’ ಹೆಸರಿನ ಯೂಟ್ಯೂಬ್ ಚಾನೆಲ್ ಅನ್ನು ಹೊಂದಿದ್ದು, 300 ಕ್ಕೂ ಹೆಚ್ಚು ಮಾತುಕತೆ ಮತ್ತು ಸಂದರ್ಶನಗಳ ವೀಡಿಯೊಗಳು ಮತ್ತು ಸಾವಿರಾರು ವೀಕ್ಷಣೆಗಳನ್ನು ಹೊಂದಿದ್ದಾರೆ ಎಂದು ಅಧಿಕಾರಿ ಹೇಳಿದರು.





