ವಿಟ್ಲ: ಪ.ಪಂ ಚುನಾವಣೆ ಹಿನ್ನೆಲೆ:
ಕಾಂಗ್ರೆಸ್ ಪಕ್ಷದ “ಪ್ರಜೆಗಳ ಪ್ರಣಾಳಿಕೆ” ವಿಟ್ಲ ಪೇಟೆಯಲ್ಲಿ ಸಾರ್ವಜನಿಕರಿಗೆ ವಿತರಿಸಿದ ಮಾಜಿ ಸಚಿವ ರಮಾನಾಥ ರೈ
ವಿಟ್ಲ: ನಮ್ಮ ಪಕ್ಷದ ಪ್ರಣಾಳಿಕೆ ಪಜೆಗಳ ಪ್ರಣಾಳಿಕೆಯಾಗಿದೆ. ಪ್ರಜೆಗಳು ನೀಡಿದ ಪ್ರಣಾಳಿಕೆಗೆ ನಾವು ಗೌರವ ಕೊಡುತ್ತೇವೆ. ನಮಗೆ ಅದನ್ನು ನೆರವೇರಿಸಿಕೊಡಲು ಹಾಗೂ ಪಟ್ಟಣ ಪಂಚಾಯತ್ ನ ಸಮಗ್ರ ಅಭಿವೃದ್ದಿಗಾಗಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಿ ಗೆಲ್ಲಿಸಿ. ಈ ಭಾರಿ ಚುನಾವಣೆಗೆ ಉತ್ತಮ ಅಭ್ಯರ್ಥಿಗಳನ್ನು ಸ್ಪರ್ಧೆಗೆ ನಿಲಿಸಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನ ಸ್ವರವಿಲ್ಲ. ಅಭಿವೃದ್ದಿಯೊಂದೇ ನಮ್ಮ ಮಂತ್ರವಾಗಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈಯವರು ಹೇಳಿದರು.

ಅವರು ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಯ ಅಂಗವಾಗಿ ತಯಾರಿಸಲಾದ ಕಾಂಗ್ರೆಸ್ ಪಕ್ಷದ ಪ್ರಜೆಗಳ ಪ್ರಣಾಳಿಕೆಯನ್ನು ವಿಟ್ಲ ಪೇಟೆಯಲ್ಲಿ ಸಾರ್ವಜನಿಕರಿಗೆ ವಿತರಣೆ ಮಾಡಿ ಬಳಿಕ ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು.
ಪ್ರಜೆಗಳ ಪ್ರಣಾಳಿಕೆ ಇದೊಂದು ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ವಿನೂತನ ಪ್ರಯೋಗವಾಗಿದೆ. ಜನರ ಅಹವಾಲುಗಳನ್ನು ಅವರಿಂದಲೇ ಪಡೆದು ಅದರಲ್ಲಿ ಆಯ್ದ ಕೆಲವನ್ನು ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ಮುಂದೆ ಅಧಿಕಾರ ಬಂದ ಮೇಲೆ ಅದಕ್ಕೆ ಪ್ರಥಮ ಪ್ರಾಶಸ್ಯವನ್ನು ನೀಡಿ ಕೆಲಸ ಮಾಡುವುದೇ ಅದರ ಉದ್ದೇಶವಾಗಿದೆ. ಸಮಸ್ಯೆಗಳನ್ನು ಪರಿಹಾರ ಮಾಡಲು ಇದು ನಮಗೆ ಅನುಕೂಲವಾಗುತ್ತದೆ.
ಪಟ್ಟಣ ಪಂಚಾಯತ್ ಕಳೆದ ಅವಧಿಯಲ್ಲಿ ಬಹುಮತ ಇಲ್ಲದಿದ್ದರೂ ಮೀಸಲಾತಿಯ ಆಧಾರದಲ್ಲಿ ಅಧ್ಯಕ್ಷ ಸ್ಥಾನ ಕಾಂಗ್ರೆಸ್ ಪಾಲಾಗಿತ್ತು. ಬಹುಮತ ಇದ್ದ ಬಿಜೆಪಿಯವರ ಅಭಿವೃದ್ದಿ ಮಾಡುವ ಗೋಜಿಗೆ ಹೋಗದೆ ಕೇವಲ ರಾಜಕೀಯ ಮಾಡಿಕೊಂಡು ಕಾಲಹರಣ ಮಾಡಿದರು. ಬಿಜೆಪಿ ಕಳೆದ ಭಾರಿ ಆಡಳಿತ ನಡೆಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದೀಗ ಬೆಂಗಳೂರಿಗೆ ತೆರಳಿ ಗುತ್ತಿಗೆದಾರರು ೪೦% ಕಮಿಷನ್ ನೀಡಿ ಕೆಲಸ ತರುವಂತಹ ವ್ಯವಸ್ಥೆ ಆಗಿದೆ. ೪೦ % ಕಮಿಶನ್ ನೀಡುವುದಾದರೆ ಉಳಿದ ೬೦% ನಲ್ಲಿ ಎಷ್ಟು ಕೆಲಸ ಮಾಡಬಹುದು ನೀವೇ ಯೋಚಿಸಿ. ಬಿಜೆಪಿ ಪಕ್ಷ ಬ್ರಷ್ಟರ ಪಕ್ಷವಾಗುತ್ತಿದೆ ಎಂದರು.
ಮಾಜಿ ಶಾಸಕಿ ಶಕುಂತಳಾ ಟಿ.ಶೆಟ್ಟಿ, ವಿಟ್ಲ – ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ವಿ., ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಚುನಾವಣಾ ಉಸ್ತುವಾರಿಗಳಾದ ಪ್ರವೀಣ್ ಚಂದ್ರ ಆಳ್ವ, ಮರುಳೀಧರ ರೈ ಮಠಂತಬೆಟ್ಟು, ಎಂ.ಎಸ್ ಮಹಮ್ಮದ್, ಚಂದ್ರ ಹಾಸ್ ಕರ್ಕೇರ, ಮಹಮ್ಮದ್ ಕುಂಜತ್ತಬೈಲ್, ಪುತ್ತೂರು ಬ್ಲಾಕ್ ಕಾಂಗ್ರೆಸ್ ನ ಮಾಜಿ ಅಧ್ಯಕ್ಷರಾದ ಮಹಮ್ಮದ್ ಬಡಗನ್ನೂರು, ಕಾಂಗ್ರೆಸ್ ನಾಯಕರಾದ ವೆಂಕಪ್ಪ ಗೌಡ ಸುಳ್ಯ, ಪ್ರಸಾದ್ ಕೌಶಲ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.





