ಶಾಲೆಯ ಪರೀಕ್ಷೆ ಮುಗಿಸಿ ನದಿಯಲ್ಲಿ ಈಜಾಡಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು

ತುಮಕೂರು: ಶಾಲೆಯಲ್ಲಿ ಪರೀಕ್ಷೆ ಮುಗಿಸಿಕೊಂಡು ಮಂಗಳವಾರ ಸಮೀಪದ ಜಯಮಂಗಲಿ ನದಿಯಲ್ಲಿ ಈಜಾಡಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತುಮಕೂರು ಜಿಲ್ಲೆಯ ಕೊಡಿಗೇನಹಳ್ಳಿಯಲ್ಲಿ ನಡೆದಿದೆ.
ಹರ್ಷವರ್ಧನ (14) ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಬಾಲಕ. ಹೋಬಳಿಯ ರಂಗನಹಳ್ಳಿ ಗ್ರಾಮದ ದೇವರಾಜು ಅವರ ಮಗ ಹರ್ಷವರ್ಧನ ಕೊಡಿಗೇನಹಳ್ಳಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ.
ಪಟ್ಟಣದ ಬಿಸಿಎಂ ಹಾಸ್ಟೆಲ್‌ನಲ್ಲಿದ್ದ. ಮಂಗಳವಾರ ಶಾಲೆಯಲ್ಲಿ ನಡೆದ ಚಿತ್ರಕಲೆ ಪರೀಕ್ಷೆಗೆ ಹಾಜರಾಗಿ ಮಧ್ಯಾಹ್ನ 1:30ಕ್ಕೆ ಶಾಲೆ ಬಿಟ್ಟ ನಂತರ ಸ್ನೇಹಿತರ ಜೊತೆಗೂಡಿ ಜಯಮಂಗಲಿ ನದಿಯಲ್ಲಿ ಈಜಲು ತೆರಳಿದ್ದಾನೆ. ಈ ವೇಳೆ ಸುಮಾರು 15ರಿಂದ 20 ಅಡಿ ಆಳದ ಗುಂಡಿಯಲ್ಲಿ ಮುಳುಗಿ ಮೃತಪಟ್ಟಿದ್ದಾನೆ.