ರನ್ಯಾ ರಾವ್ ಅಕ್ರಮ ಚಿನ್ನ ಸಾಗಾಟ: ಪ್ರಕರಣದ ಸಿಐಡಿ ತನಿಖೆಯನ್ನು ಹಿಂಪಡೆದ ಸರಕಾರ

ಬೆಂಗಳೂರು: ದುಬೈನಿಂದ ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟಿ ರನ್ಯಾರಾವ್‌ಗೆ ಶಿಷ್ಟಾಚಾರ (ಪ್ರೋಟೋಕಾಲ್) ನೀಡಿದ ಆರೋಪದ ಸಂಬಂಧ ಪೊಲೀಸ್ ಸಿಬ್ಬಂದಿ ಲೋಪದೋಷಗಳ ಬಗ್ಗೆ ಸಿಐಡಿ (ಅಪರಾಧ ತನಿಖಾ ತಂಡ)ಗೆ ವಹಿಸಿದ್ದ ಪ್ರಕರಣವನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡಿದೆ.
ಈಗಾಗಲೇ ರಾಜ್ಯ ಪೊಲೀಸ್ ಗೃಹ ಮಂಡಳಿ ವ್ಯವಸ್ಥಾಪಕ ನಿರ್ದೇಶಕ ಹಾಗೂ ಡಿಜಿಪಿ ರಾಮಚಂದ್ರರಾವ್ ಪಾತ್ರದ ಬಗ್ಗೆ ತನಿಖೆ ನಡೆಸಲು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಹಿರಿಯ ಐಎಎಸ್ ಅಧಿಕಾರಿ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ನೇತೃತ್ವದಲ್ಲಿ ತನಿಖೆಗೆ ಆದೇಶಿಸಲಾಗಿದೆ. ಜತೆಗೆ ಪೊಲೀಸ್ ಸಿಬ್ಬಂದಿ ಕರ್ತವ್ಯ ಲೋಪ ಎಸಗಿರಬಹುದಾದ ಸಂಭಾವ್ಯತೆ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಸಿಐಡಿಗೆ ತನಿಖೆ ನಡೆಸುವಂತೆ ಸರ್ಕಾರ ಮಂಗಳವಾರ ಆದೇಶಿಸಿತ್ತು.