ಕುಂದಾಪುರ: ಟ್ಯಾಂಕರ್ ಗಳಿಂದ ಡೀಸೆಲ್ ಕಳವು ಮಾಡುತ್ತಿದ್ದ ಆರೋಪಿಯ ಬಂಧನ

ಕುಂದಾಪುರ: ತಾಲೂಕಿನ ಸಿದ್ದಾಪುರದಲ್ಲಿ ಟ್ಯಾಂಕರ್ ಗಳಿಂದ ಡೀಸೆಲ್ ಕಳವು ಮಾಡುತ್ತಿದ್ದ ಆರೋಪಿ ಜಯರಾಮ ಎಂಬಾತನನ್ನು ಪೊಲೀಸರು ರೆಡ್ ಹ್ಯಾಂಡ್ ಆಗಿ ಸೋಮವಾರ ರಾತ್ರಿ ಸೆರೆ ಹಿಡಿದಿದ್ದಾರೆ.
ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ, ಶಂಕರನಾರಾಯಣ ಪಿಎಸ್‌ಐ ನಾಸೀರ್ ಹುಸೇನ್ ಮತ್ತು ಪೊಲೀಸರ ತಂಡ ದಾಳಿ ನಡೆಸಿದೆ.
ರಾತ್ರಿ 8 ಗಂಟೆಗೆ ಪೊಲೀಸರ ತಂಡ ಸ್ಥಳಕ್ಕೆ ಬಂದ ವೇಳೆ ಸಿದ್ದಾಪುರ- ಅಂಪಾರು ಮುಖ್ಯ ರಸ್ತೆಯಿಂದ ಹೊಂಡಾ ಶೋರೂಂ ಬದಿಯಲ್ಲಿ ಹೋಗುವ ಕಾಲು ದಾರಿಯಲ್ಲಿ ಸುಬ್ಬರಾವ್ ಕಾಂಪ್ಲೆಕ್ಸ್‌ನ ಸರ್ವಿಸ್ ಸ್ಟೇಷನ್ ಪಕ್ಕದ ಖಾಲಿ ಜಾಗದಲ್ಲಿ ಇಂಧನ ಸಾಗಿಸುವ ಟ್ಯಾಂಕರ್ ಹಾಗೂ ಅದರ ಬಳಿ ಆರೋಪಿ ಜಯರಾಮ ಎಂಬಾತ ನಿಂತಿದ್ದ.
ಆತ ಟ್ಯಾಂಕರ್‌ನ ಕೆಳಗಿರುವ ಇಂಧನ ಟ್ಯಾಂಕ್‌ನಿಂದ ಪೈಪ್ ಹಾಗೂ ಜಾಕ್ ಬಳಸಿ ಕ್ಯಾನ್‌ಗಳಿಗೆ ಇಂಧನವನ್ನು ತುಂಬಿಸುತ್ತಿರುವುದು ಕಂಡುಬಂದಿದ್ದು, ದಾಳಿ ನಡೆಸಿದ ಪೊಲೀಸರು ಆತನನ್ನು ಸೆರೆಹಿಡಿದರು. ಟ್ಯಾಂಕರ್ ಬಳಿ ಇದ್ದ ಚಾಲಕನಲ್ಲಿ ವಿಚಾರಿಸಿದಾಗ ತಾನು ಪ್ರತಿ ಡಿಸೇಲ್ ಟ್ಯಾಂಕ್‌ನಿಂದ 20 ಲೀಟರ್ ಡಿಸೇಲನ್ನು ಕಳವು ಮಾಡಿ ಸಿದ್ದಾಪುರದ ವಿಜಯ ಎಂಬಾತನಿಗೆ ನೀಡುತ್ತಿರುವುದಾಗಿ ತಿಳಿಸಿದ್ದ. ಈ ಸಂದರ್ಭ ಆರೋಪಿ ವಿಜಯ್ ತಪ್ಪಿಸಿಕೊಂಡಿದ್ದಾನೆ.
ಡೀಸೆಲ್ ಟ್ಯಾಂಕಿನ ಬಳಿ ಒಂದು ಕ್ಯಾನ್ ಇದ್ದು ಅದರಲ್ಲಿ ಸುಮಾರು 20 ಲೀಟರ್ ಡಿಸೇಲ್ ಪತ್ತೆಯಾಗಿದೆ. ಪೊಲೀಸರು ಶೋಧ ಕಾರ್ಯ ಮುಂದುವರಿಸಿದಾಗ ಸರ್ವೀಸ್ ಸ್ಟೇಷನ್‌ನ ಉತ್ತರ ಬದಿಯಲ್ಲಿ ಡಿಸೇಲ್ ಹಾಗೂ ಪೆಟ್ರೋಲ್ ತುಂಬಿಸಿರುವುದು ಕಂಡು ಬಂದಿದ್ದು ಅದರಲ್ಲಿ 1020 ಲೀಟರ್ ಡಿಸೇಲ್, 30 ಲೀಟರ್ ಪೆಟ್ರೋಲ್, 3 ಪೈಪ್ ಹಾಗೂ ಒಂದು ಡಿಸೇಲ್ ತೆಗೆಯುವ ಲಿಫ್ಟ್ ಮೋಟಾರ್ ಪತ್ತೆಯಾಗಿದ್ದು, ಅವುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಬಗ್ಗೆ ಶಂಕರನಾರಾಯಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.