ಬಂಟ್ವಾಳ: 16 ದಿನಗಳ ಬಳಿಕ ಮನೆ ಸೇರಿದ ದಿಗಂತ್

ಬಂಟ್ವಾಳ: ಕೊನೆಗೂ 16 ದಿನಗಳ ಬಳಿಕ ಮನೆಯ ಕಡೆ ಹೆಜ್ಜೆ ಹಾಕಿದ ದಿಗಂತ್, ಈ ಮೂಲಕ ದಿಗಂತ್ ಪ್ರಕರಣ ಸುಖಾಂತ್ಯಗೊಂಡಿದೆ. ಫರಂಗಿಪೇಟೆ ಸಮೀಪದ ಕಿದೆಬೆಟ್ಟು ಪದ್ಮನಾಭ ಅವರ ಪುತ್ರ ದಿಗಂತ್ ನಾಪತ್ತೆ ಪ್ರಕರಣ ಇದೀಗ ಕ್ಲೀನ್ ಚಿಟ್ ಆಗಿದೆ.
ಫೆ.25 ರಂದು ದಿಗಂತ್ ಫರಂಗಿಪೇಟೆ ರೈಲ್ವೆ ಹಳಿಯಿಂದ ರಾತ್ರಿ ವೇಳೆ ನಾಪತ್ತೆಯಾಗಿದ್ದ. ಪಿಯುಸಿ ಪರೀಕ್ಷೆಯ ಪ್ರವೇಶ ಪತ್ರವನ್ನು ಕಾಲೇಜಿನಿಂದ ತಂದಿದ್ದ ದಿಗಂತ್ ಬಳಿಕ ಸಂಜೆ ವೇಳೆ ದೇವಸ್ಥಾನಕ್ಕೆಂದು ತೆರಳಿದ್ದು, ಅಲ್ಲಿಂದ ನಾಪತ್ತೆಯಾಗಿದ್ದ. ಅಪ್ರಾಪ್ತ ಬಾಲಕ ನಿಗೂಢವಾಗಿ ನಾಪತ್ತೆಯಾಗಿದ್ದು, ಸಾಕಷ್ಟು ಗೊಂದಲಕ್ಕೆ ಕಾರಣವಾಗಿ ಬೇರೆಬೇರೆ ರೀತಿಯ ಗಾಸಿಫಗ್ ಗಳಿಗೂ ಅವಕಾಶ ಮಾಡಿಕೊಟ್ಟಿತ್ತು. ಇದರ ಜೊತೆಗೆ ಈತನ ಪತ್ತೆಗಾಗಿ ಪ್ರತಿಭಟನೆಯನ್ನು ನಡೆಸಲಾಯಿತು.
ದ.ಕ.ಜಿಲ್ಲೆಯ ಪೋಲೀಸರಿಗೆ ಸವಾಲಿನ ಪ್ರಕರಣವಾಗಿ ಮಾರ್ಪಾಡುಗೊಂಡಿತ್ತಲ್ಲದೆ, ಈತ ನಾಪತ್ತೆಯಾದ ಸ್ಥಳದಿಂದ ಬಳಿಕದ ಯಾವುದೇ ಮಾಹಿತಿಗಳು ಲಭ್ಯವಿಲ್ಲದೆ ಒಂದಷ್ಟು ತಲೆನೋವಿನ ವಿಚಾರವಾಗಿ ಮಾರ್ಪಾಡುಗೊಂಡಿತ್ತು. ಆದರೂ ಈ ಬಗ್ಗೆ ವಿಚಲಿತಗೊಳ್ಳದ ದ.ಕ.ಜಿಲ್ಲೆಯ ಎಸ್.ಪಿ.ಯತೀಶ್ ಎನ್.ಅವರು ತನಿಖೆಗೆ ಪೂರಕವಾದ ವಾತಾವರಣ ನಿರ್ಮಾಣ ಮಾಡಿ ಪತ್ತೆಗಾಗಿ ಹರಸಾಹಸ ಪಟ್ಟಿದ್ದರು.
ನಾಪತ್ತೆಯಾದ ಸ್ಥಳದಲ್ಲಿ ಚಪ್ಪಲಿ ಬಿಟ್ಟುಹೋದ ದಿಗಂತ್ ಮೊಬೈಲ್ ಕೂಡ ಅಲ್ಲೇ ಬಿಟ್ಟು ಹೋಗಿದ್ದ, ಅಲ್ಲದೆ ಚಪ್ಪಲಿಯಲ್ಲಿ ರಕ್ತದ ಕಲೆ ಇದ್ದು ಪ್ರಕರಣದ ಒಂದಷ್ಟು ಗೊಂದಲಗಳನ್ನು ಉಂಟು ಮಾಡಿತ್ತು. ಈ ನಡುವೆ ದಿಗಂತ್ ನನ್ನು ಪತ್ತೆ ಮಾಡಲೇಬೇಕಾದ ಅನಿವಾರ್ಯ ಪರಿಸ್ಥಿತಿ ಪೋಲೀಸರಿಗೆ ಬಂದೊದಗಿದರೆ ಇತ್ತ ವಿಧಾನ ಸಭೆಯಲ್ಲಿ ಈತನ ನಾಪತ್ತೆ ವಿಚಾರ ಪ್ರತಿಧ್ವನಿಸಿತು. ಆದರೆ 11 ದಿನ ಕಳೆದು ಹೋದರು ಪೋಲೀಸರಿಗೆ ಈತನ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ, ಬೇರೆ ಬೇರೆ ಜಿಲ್ಲೆಗಳಲ್ಲಿ ಪೋಲೀಸರ ತಂಡ ಕೆಲಸ ಮಾಡಿ, ಕೊನೆಯ ಅಸ್ತ್ರವಾಗಿ ನಾಪತ್ತೆಯಾದ ಸ್ಥಳದ ಸುತ್ತಮುತ್ತಲಿನ ಐದು ಕಿ.ಮೀ ವ್ಯಾಪ್ತಿಯಲ್ಲಿ ಕೊಂಬಿಂಗ್ ಕಾರ್ಯಚರಣೆಯನ್ನು ಕೈಗೊಂಡಿತು. ಆದರೆ ಕೊಂಬಿಂಗ್ ಕಾರ್ಯಚರಣೆ ನಡೆಯುತ್ತಿದ್ದಂತೆ ದಿಗಂತ್ ನಿಗೂಢವಾಗಿಯೇ ಉಡುಪಿಯ ಡಿ.ಮಾರ್ಟ್ ನಲ್ಲಿ ಸಿಕ್ಕಿಕೊಳ್ಳುತ್ತಾನೆ. ಅದಾಗಲೇ ಅರ್ಧ ಪ್ರಕರಣ ಸುಖಾಂತ್ಯ ಕಂಡುಬಂದಿತ್ತಾದರೂ ಸಾಕಷ್ಟು ಊಹಾಪೋಹಗಳು ಕೇಳಿ ಬಂದ ಕಾರಣ ಮತ್ತೆ ಪ್ರಕರಣ ಜಟಿಲಿವಾಗುತ್ತದೆ ಎಂಬ ಆತಂಕ ಉಂಟುಮಾಡಿತ್ತು. ಆದರೆ ಅಪ್ರಾಪ್ತ ಬಾಲಕನಾಗಿದ್ದರಿಂದ ಈತನನ್ನು ಮಂಗಳೂರಿನ ಚೈಲ್ಡ್ ವೆಲ್ ಫೇರ್ ಕಮಿಟಿಯ ಆಶ್ರಯಕ್ಕೆ ಸ್ಥಳಾಂತರ ಮಾಡಲಾಗಿತ್ತು.
ನಾಪತ್ತೆ ಪ್ರಕರಣದ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾದ ಕಾರಣದಿಂದ ಇಂದು ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದೆ. ಮಕ್ಕಳ ಕಲ್ಯಾಣ ಸಮಿತಿಯ ಮುಂದೆ ದಿಗಂತ್ ಮನೆಗೆ ಹೋಗುವ ವಿಚಾರ ಹೇಳಿದರೆ ಆತನನ್ನು ಮನೆಗೆ ಕಳುಹಿಸಿಕೊಡಿ ಎಂದು ನ್ಯಾಯಾಲಯ ಅದೇಶ ಮಾಡಿತ್ತು. ಆರಂಭದಲ್ಲಿ ಆತ ಮನೆಗೆ ಹೋಗುವುದಿಲ್ಲ ಎಂದು ಹೇಳಿಕೊಂಡಿದ್ದ ಎಂದು ಹೇಳಲಾಗಿತ್ತು.
ಆದರೆ ಇದೀಗ ಎಲ್ಲಕ್ಕೂ ಪುಲ್ವಸ್ಟಾಪ್ ಸಿಕ್ಕಿದ್ದು, ಮನೆಯವರ ಜೊತೆ ದಿಗಂತ್ ಸೇಫ್ ಅಗಿ ತನ್ನ ಗೂಡು ಸೇರಿದ್ದಾನೆ ಎಂದು ಪೋಲೀಸ್ ಮೂಲಗಳು ಹೇಳಿವೆ. ಇಲ್ಲಿಗೆ ದಿಗಂತ್ ಪ್ರಕರಣ ಸುಖಾಂತ್ಯ ಕಂಡಿದೆ.