ಲೋಕ ರೈಡ್: ಆಹಾರ ಸುರಕ್ಷತಾ ಅಧಿಕಾರಿಯ ಮನೆಯಲ್ಲಿ ಕೆಜಿ, ಕೆಜಿ ಚಿನ್ನಾಭರಣ ಸೇರಿ ಅಪಾರ ಪ್ರಮಾಣದ ಆಸ್ತಿ ಪತ್ತೆ
ದಾವಣಗೆರೆ: ಆಹಾರ ಸುರಕ್ಷತಾ ಹಾಗೂ ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿ ಡಾ.ಜಿ.ಎಸ್. ನಾಗರಾಜು ಅವರ ಮನೆಯಲ್ಲಿ 1 ಕೆ.ಜಿ 597 ಗ್ರಾಂ ಚಿನ್ನಾಭರಣ ಸೇರಿ ಅಪಾರ ಪ್ರಮಾಣದ ಆಸ್ತಿಯನ್ನು ಲೋಕಾಯುಕ್ತ ಪೊಲೀಸರು ಪತ್ತೆ ಮಾಡಿದ್ದಾರೆ.
ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿರುವ ಆರೋಪದಡಿ ನಾಗರಾಜು ಅವರಿಗೆ ಸೇರಿದ ಐದು ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರು ಗುರುವಾರ ದಾಳಿ ನಡೆಸಿದ್ದರು. ಘೋಷಿತ ಆದಾಯಕ್ಕಿಂತ ಶೇ 150ಕ್ಕೂ ಹೆಚ್ಚು ಪ್ರಮಾಣದ ಆಸ್ತಿ ಹೊಂದಿರುವುದು ಗೊತ್ತಾಗಿದ್ದು, ಪರಿಶೀಲನೆ ಮುಂದುವರಿದಿದೆ.
‘ಎಸ್.ನಿಜಲಿಂಗಪ್ಪ ಬಡಾವಣೆಯ ಮನೆ, ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಕಚೇರಿ, ಪಾಲಕರ ಮನೆ, ಫಾರಂಹೌಸ್ ಹಾಗೂ ಕುಟುಂಬದ ಹಿಡಿತದಲ್ಲಿರುವ ಸಹಕಾರ ಸಂಘದ ಕಚೇರಿ ಮೇಲೆ ದಾಳಿ ಮಾಡಲಾಗಿತ್ತು. 5 ಕೆ.ಜಿ. 240 ಗ್ರಾಂ ಬೆಳ್ಳಿ ವಸ್ತುಗಳು, 38 ಎಕರೆ ಕೃಷಿ ಭೂಮಿ, 4 ಮನೆ ಹಾಗೂ 1 ನಿವೇಶನ, ಅಂದಾಜು ₹ 32 ಲಕ್ಷ ಮೌಲ್ಯದ ಪೀಠೋಪಕರಣ ಹಾಗೂ ₹ 38 ಲಕ್ಷ ಮೌಲ್ಯದ ವಾಹನಗಳು ಪತ್ತೆಯಾಗಿವೆ’ ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಸ್. ಕೌಲಾಪುರೆ ತಿಳಿಸಿದ್ದಾರೆ.




