ಪೆರುವಾಯಿ: ವೀರಯೋಧ ಚಂದ್ರಶೇಖರ ಪೂಜಾರಿ ಅವರಿಗೆ ಸೆ. 27 ರಂದು ಹುಟ್ಟೂರ ಸನ್ಮಾನ ಮತ್ತು ಬೃಹತ್ ತಿರಂಗಾ ವಾಹನ ಜಾಥಾ
ಪೆರುವಾಯಿ: ಭಾರತೀಯ ಭೂಸೇನೆಯಲ್ಲಿ ಕಳೆದ 23 ವರ್ಷಗಳ ಕಾಲ (2003-2026) ಸುದೀರ್ಘ ಹಾಗೂ ಪ್ರಾಮಾಣಿಕ ಸೇವೆ ಸಲ್ಲಿಸಿ, ‘ACP ನಾಯಬ್ ಸುಬೇದಾರ್’ ಹುದ್ದೆಗೆ ಪದೋನ್ನತಿ ಪಡೆದು ಇತ್ತೀಚೆಗೆ ಸೇವಾನಿವೃತ್ತರಾದ ಪೆರುವಾಯಿಯ ಹೆಮ್ಮೆಯ ವೀರಯೋಧ ಚಂದ್ರಶೇಖರ ಪೂಜಾರಿ ಕಲ್ಲಡ್ಕ ಅವರಿಗೆ ಹುಟ್ಟೂರಿನ ಸಾರ್ವಜನಿಕ ಸನ್ಮಾನ ಸಮಿತಿಯ ಆಶ್ರಯದಲ್ಲಿ ಸೆಪ್ಟೆಂಬರ್ 27ರ ಆದಿತ್ಯವಾರ ಭವ್ಯ ಹುಟ್ಟೂರ ಸನ್ಮಾನ ಹಾಗೂ ಬೃಹತ್ ತಿರಂಗಾ ವಾಹನ ಜಾಥಾ ಆಯೋಜಿಸಲಾಗಿದೆ.
ಮುಚ್ಚಿರಪದವು ಚರ್ಚ್ ಬಳಿಯಿಂದ ಯೋಧನ ಗೌರವಾರ್ಥವಾಗಿ ಬೃಹತ್ ತಿರಂಗಾ ವಾಹನ ಜಾಥಾ ಹೊರಡಲಿದೆ. ಈ ಜಾಥಾವು ಪೆರುವಾಯಿ ಗ್ರಾಮ ಪಂಚಾಯತ್ ವಠಾರದವರೆಗೆ ಸಾಗಿ, ಬಳಿಕ ಪೆರುವಾಯಿ ಜಂಕ್ಷನ್ ಬಳಿಯ ಕರಾವಳಿ ಮೈದಾನಕ್ಕೆ ಹಿಂತಿರುಗಲಿದೆ.
ಸಾಯಂಕಾಲ 6.00 ಕ್ಕೆ ಕರಾವಳಿ ಮೈದಾನದಲ್ಲಿ ಸಭಾ ಕಾರ್ಯಕ್ರಮ ಹಾಗೂ ಸನ್ಮಾನ ನಡೆಯಲಿದೆ.
ಪೆರುವಾಯಿ ಗುತ್ತು ಶ್ರೀ ರಾಜೇಂದ್ರನಾಥ ರೈ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಸರ್ವಧರ್ಮದ ಮುಖಂಡರ ಉಪಸ್ಥಿತಿ:
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಕುಕ್ಕಾಜೆ-ಮಾಣಿಲ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಶ್ರೀ ಶ್ರೀ ಕೃಷ್ಣ ಗುರೂಜಿ, ಪೆರುವಾಯಿ ಬದ್ರಿಯಾ ಜುಮಾ ಮಸೀದಿಯ ಧರ್ಮಗುರುಗಳಾದ ಮುಹಮ್ಮದ್ ಶರೀಫ್ ಮದನಿ, ಪೆರುವಾಯಿ ಫಾತಿಮಾ ಮಾತೆಯ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಫಾದರ್ ಸೈಮನ್ ಡಿಸೋಜಿ, ಪೆರುವಾಯಿ ಮುಹಿಯ್ಯದ್ದೀನ್ ಜುಮಾ ಮಸೀದಿಯ ಧರ್ಮಗುರುಗಳಾದ ಜಾಫರ್ ಸ್ವಾದಿಖ್ ಬಾಐವಿ ಅಲ್ ಯಮಾನಿ ಉಪಸ್ಥಿತರಿರಲಿದ್ದಾರೆ.
ಇವರೊಂದಿಗೆ ಪ್ರಗತಿಪರ ಕೃಷಿಕರಾದ ಶ್ರೀ ಕೃಷ್ಣಪ್ರಸಾದ್ ಕಡಂಬಿಲ, ಬಾಳೆಕಲ್ಲು ಶ್ರೀ ಬ್ರಹ್ಮಬೈದರ್ಕಳ ಗರಡಿ ಕ್ಷೇತ್ರದ ಶ್ರೀ ಕೊರಗಪ್ಪ ಪೂಜಾರಿ ಬಾಳೆಕಲ್ಲು, ಕಲ್ಲಡ್ಕದ ಶ್ರೀ ರಾಮಣ್ಣ ಪೂಜಾರಿ ಹಾಗೂ ಯೋಧನ ಮಾತೃಶ್ರೀ ಶ್ರೀಮತಿ ಸುಂದರಿ ಕಲ್ಲಡ್ಕ ಪೆರುವಾಯಿ ಭಾಗವಹಿಸಲಿದ್ದಾರೆ.
ತಮ್ಮ ಕರ್ತವ್ಯದ ಅವಧಿಯಲ್ಲಿ ಹಿರಿಯ ಸೇನಾಧಿಕಾರಿಗಳಿಂದ ಎರಡು ಬಾರಿ ಸೇನೆಯ ಪ್ರಶಂಸಾ ಪತ್ರ ಪಡೆದ ಹೆಮ್ಮೆಯ ಯೋಧನನ್ನು ಗೌರವಿಸುವ ಈ ದೇಶಪ್ರೇಮದ ಕಾರ್ಯಕ್ರಮಕ್ಕೆ ಸಾರ್ವಜನಿಕರು, ಬಂಧು-ಭಗಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕಾಗಿ ಸಾರ್ವಜನಿಕ ಸನ್ಮಾನ ಸಮಿತಿ ಪೆರುವಾಯಿ ಪ್ರಕಟಣೆಯಲ್ಲಿ ವಿನಂತಿಸಿದೆ. ಕಾರ್ಯಕ್ರಮದ ಕೊನೆಯಲ್ಲಿ ಸಾರ್ವಜನಿಕ ಭೋಜನದ ವ್ಯವಸ್ಥೆ ಇರಲಿದೆ.





