September 23, 2026

ಮಂಗಳೂರು: ಅಪಘಾತದಲ್ಲಿ ಗಾಯಗೊಂಡಿದ್ದ ರಮಾನಾಥ ರೈ ಆಸ್ಪತ್ರೆಯಿಂದ ಡಿಸ್ಚಾರ್ಜ್

0
image_editor_output_image2068543965-1790140313868

ಮಂಗಳೂರು: ಕಾರ್ಕಳದ ಸಾಣೂರು ಬಳಿ ಭಾನುವಾರ ನಡೆದ ಭೀಕರ ಕಾರು ಮತ್ತು ಖಾಸಗಿ ಬಸ್ ಮುಖಾಮುಖಿ ಡಿಕ್ಕಿ ಅಪಘಾತದಲ್ಲಿ ಗಾಯಗೊಂಡಿದ್ದ ಹಿರಿಯ ಕಾಂಗ್ರೆಸ್ ನಾಯಕ, ಮಾಜಿ ಸಚಿವ ಬಿ. ರಮಾನಾಥ ರೈ ಅವರು ಚೇತರಿಸಿಕೊಂಡು ಮಂಗಳವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ.

ಮಂಗಳೂರಿನ ಯೆನೆಪೋಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರೈ ಅವರಿಗೆ ಸಂಪೂರ್ಣ ಗುಣಮುಖರಾಗಲು ಮನೆಯಲ್ಲೇ 15 ದಿನಗಳ ಕಾಲ ಕಡ್ಡಾಯ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

 

ಪಂಚಾಯತ್ ಸದಸ್ಯರೊಬ್ಬರ ಮದುವೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ರಮಾನಾಥ್ ರೈ ಅವರು ತಮ್ಮ ಆಪ್ತರೊಂದಿಗೆ ಕಾರ್ಕಳಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ರಾಷ್ಟ್ರೀಯ ಹೆದ್ದಾರಿ 169ರ ಸಾಣೂರು ಶ್ರೀರಾಮ ಮಂದಿರ ಡಿವೈಡರ್ ಕ್ರಾಸ್ ಬಳಿ ಎದುರಿನಿಂದ ಬಂದ ಖಾಸಗಿ ಬಸ್ಸೊಂದು ಇವರ ಕಾರಿಗೆ ಭೀಕರವಾಗಿ ಡಿಕ್ಕಿ ಹೊಡೆದಿತ್ತು.ಮಂಗಳೂರು ಹೋಟೆಲ್

ಅಪಘಾತದಲ್ಲಿ ಗಾಯಗೊಂಡಿದ್ದ ಕಾರು ಚಾಲಕ ಅಭಿಷೇಕ್ ಹಾಗೂ ಆಪ್ತ ಸಹಾಯಕ ಚರಣ್ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕಾಲಿಗೆ ತೀವ್ರ ಪೆಟ್ಟಾಗಿದ್ದ ಮತ್ತೋರ್ವ ಆಪ್ತ ಸಹಾಯಕ ಡೆಂಜಿಲ್ ನೊರೊನ್ಹಾ ಅವರಿಗೆ ಮಂಗಳವಾರ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದು, ಪ್ರಸ್ತುತ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ರಮಾನಾಥ್ ರೈ ಅವರು ಅಪಾಯದಿಂದ ಪಾರಾಗಿದ್ದು, ಮನೆಗೆ ವಾಪಸಾಗಿರುವ ಸುದ್ದಿ ತಿಳಿದು ಕಾರ್ಯಕರ್ತರು ಹಾಗೂ ಬೆಂಬಲಿಗರು ನಿಟ್ಟುಸಿರು ಬಿಟ್ಟಿದ್ದಾರೆ. ಆಸ್ಪತ್ರೆಯಲ್ಲಿದ್ದ ವೇಳೆ ಹಲವು ಸಂಸದರು, ಶಾಸಕರು, ವಿವಿಧ ಪಕ್ಷಗಳ ರಾಜಕೀಯ ಧುರೀಣರು ಹಾಗೂ ನೂರಾರು ಅಭಿಮಾನಿಗಳು ಆಗಮಿಸಿ ಅವರ ಆರೋಗ್ಯ ವಿಚಾರಿಸಿದ್ದರು.

Leave a Reply

Your email address will not be published. Required fields are marked *

error: Content is protected !!