ಬ್ರಹ್ಮರಕೊಟ್ಲು ಟೋಲ್ ಗೇಟ್ ಪ್ರತಿಭಟನೆ: ಅವೈಜ್ಞಾನಿಕ ಟೋಲ್‌ಗೇಟ್ ತೆರವುಗೊಳಿಸದಿದ್ದಲ್ಲಿ ಜಿಲ್ಲೆಯ ಜನತೆಯನ್ನು ಪಕ್ಷಾತೀತವಾಗಿ ಸೇರಿಸಿ ಹೋರಾಡಲು ಎಸ್‌ಡಿಪಿಐ ಸಿದ್ಧವಾಗಿದೆ: ಅನ್ವರ್ ಸಾದತ್ ಬಜತ್ತೂರು
ಬಂಟ್ವಾಳ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಮಂಗಳೂರು ಗ್ರಾಮಾಂತರ ಜಿಲ್ಲಾ ಸಮಿತಿಯ ವತಿಯಿಂದ ಬ್ರಹ್ಮರಕೊಟ್ಲು ಟೋಲ್‌ಗೇಟ್ ಅವ್ಯವಸ್ಥೆಯ ವಿರುದ್ಧ ಕೈಕಂಬದಿಂದ ಟೋಲ್ ಗೇಟ್ ವರೆಗೆ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನೆಯು ಶುಕ್ರವಾರ ನಡೆಯಿತು.
ಕೈಕಂಬ ಜಂಕ್ಷನ್‌ನಲ್ಲಿ ಎಸ್‌ಡಿಪಿಐ ಧ್ವಜವನ್ನು ಅನ್ವರ್ ಸಾದತ್ ಬಜತ್ತೂರು ಅವರು ಜಿಲ್ಲಾ ಉಪಾಧ್ಯಕ್ಷ, ಕಾರ್ಯಕ್ರಮದ ಉಸ್ತುವಾರಿ ಮೂನಿಶ್ ಅಲಿಯವರಿಗೆ ಹಸ್ತಾಂತರಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಿದರು.


ಪ್ರತಿಭಟನಾ ಸಭೆಯಲ್ಲಿ ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಬಜತ್ತೂರು ಮಾತನಾಡಿ, ಆಡಳಿತ ಸರ್ಕಾರವು ಜನರ ಹಿತರಕ್ಷಣೆ ಕಾಪಾಡುವಲ್ಲಿ ವಿಫಲವಾಗಿದೆ. ಜನರಿಗೆ ಸುಗಮ ಸಂಚಾರಕ್ಕೆ ಸಮರ್ಪಕವಾದ ರಸ್ತೆಯನ್ನು ಮಾಡದೆ ಜನರನ್ನು ದೋಚುವ ಟೋಲ್ ಗೇಟ್ ಮಾಡಿ ಕಳೆದ ಹನ್ನೆರಡು ವರ್ಷಗಳಿಂದ ವಸೂಲಿ ನಡೆಯುತ್ತಿದೆ. ಟೋಲ್ ಮೊತ್ತವು ಹೆಚ್ಚಾಗುತ್ತಿರುವಾಗ ಕನಿಷ್ಠ ಮೂಲ ಸೌಕರ್ಯಗಳನ್ನು ಸಹ ಒದಗಿಸದೆ ಉತ್ತರ ಭಾರತೀಯ ಹಿಂದಿ ಭಾಷಿಕ ಗೂಂಡಾಗಳನ್ನು ಇರಿಸಿ ದಬ್ಬಾಳಿಕೆ ಮಾಡಲಾಗುತ್ತಿದೆ. ಇಂತಹ ಅವ್ಯವಸ್ಥೆಯಿಂದ, ಅವೈಜ್ಞಾನಿಕತೆಯಿಂದ ಕೂಡಿರುವ ಈ ಟೋಲ್‌ಗೇಟನ್ನು ತೆರವುಗೊಳಿಸದಿದ್ದಲ್ಲಿ ಜಿಲ್ಲೆಯ ಜನತೆಯನ್ನು ಪಕ್ಷಾತೀತವಾಗಿ ಸೇರಿಸಿ ಹೋರಾಡಲು ಎಸ್‌ಡಿಪಿಐ ಸಿದ್ಧವಾಗಿದೆ ಎಂದು ಎಚ್ಚರಿಸಿದರು. ಎಸ್‌ಡಿಪಿಐ ಮಂಗಳೂರು ನಗರ ಜಿಲ್ಲಾಧ್ಯಕ್ಷ ಜಲೀಲ್ ಕೆ ಮಾತನಾಡಿ ಅವೈಜ್ಞಾನಿಕ, ಅಸಮರ್ಪಕವಾದ ಟೋಲ್ ಗೇಟ್ ಮಾಡಿ ಜನರನ್ನು ದಬ್ಬಾಳಿಕೆಯ ಮೂಲಕ ಲೂಟುವ ಉದ್ದೇಶ ನಿಮ್ಮದಾದರೆ ಅದಕ್ಕೆ ಅವಕಾಶವನ್ನು ನೀಡುವುದಿಲ್ಲ’ ಎಂದರು.
ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಉಪಾಧ್ಯಕ್ಷ ಮೂನಿಷ್ ಅಲಿ ಮಾತನಾಡಿ’ ಈ ಟೋಲ್ ಗೇಟ್ ಕೆಲವು ಬಂಡವಾಳ ಶಾಹಿಗಳಿಗೆ, ರಾಜಕಾರಣಿಗಳಿಗೆ ವ್ಯಾಪಾರ ಕೇಂದ್ರವಾಗಿದೆ ಹೊರತು ಜನೋಪಕಾರಕ್ಕಿರುವುದಲ್ಲ. ಇದು ಒಂದು ಸುಲಿಗೆಯ ದಂಧೆಯ ಕೇಂದ್ರವೂ ಆಗಿದೆ’ ಎಂದರು.
ಎಸ್‌ಡಿಪಿಐ ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯದರ್ಶಿ ನವಾಝ್ ಕಟ್ಟೆ ಮಾತನಾಡಿ ‘ಜನ ಸಾಮಾನ್ಯರ ಮೇಲೆ ದಬ್ಬಾಳಿಕೆ ಮಾಡಿ ಮತ್ತೊಮ್ಮೆ ಟೋಲ್ ವಸೂಲಿಗೆ ಇಳಿದರೆ ಈ ಟೋಲ್ ಗೇಟ್ ನೆಲಸಮ ಮಾಡುತ್ತೇವೆ’ ಎಂಬ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಎಸ್ಡಿಪಿಐ ಪ್ರಮುಖರಾದ ಶಾಹಿದಾ ತಸ್ನೀಂ,
ಸಿದ್ದೀಕ್ ಪುತ್ತೂರು, ಸಿದ್ದೀಕ್ ಅಲೆಕ್ಕಾಡಿ, ಅಶ್ರಫ್ ತಲಪಾಡಿ, ಶಾಕಿರ್ ಅಳಕೆಮಜಲು, ನೌರೀನ್ ಆಲಂಪಾಡಿ, ಝಾಹಿದಾ ಸಾಗರ್, ರಹೀಮ್ ಇಂಜಿನಿಯರ್, ಮೂಸಬ್ಬ ತುಂಬೆ, ಝಹನ ಅಕ್ಕರಂಗಡಿ, ಅಕ್ಬರ್ ಬೆಳ್ತಂಗಡಿ, ಅಶ್ರಫ್ ಬಾವು, ಅಕ್ಬರ್ ಅಲಿ ಪೊನ್ನೋಡಿ, ರಫೀಕ್ ಎಂ.ಎಸ್, ಶರೀಫ್ ವಳವೂರು, ಇರ್ಫಾನ್ ತುಂಬೆ,
ದ.ಕ.ಜಿಲ್ಲಾ ಲಾರಿ ಚಾಲಕ ಮಾಲಕರ ಸಂಘದ ಕಾರ್ಯದರ್ಶಿ ಶಮೀರ್ ಪರ್ಲಿಯಾ, ಸದಸ್ಯ ಇಬ್ರಾಹಿಂ ಬಾಂಬಿಲ, ಜಿಲ್ಲಾ ಟ್ಯಾಕ್ಸಿ ಕಾರು ಚಾಲಕ ಮಾಲಕರ ಸಂಘದ ಅಧ್ಯಕ್ಷ ಅಬ್ದುಲ್ ಅಝೀಝ್, ಮಂಗಳೂರು ಗ್ರಾಮಾಂತರ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಇಸ್ಮಾಯಿಲ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.





