ನಿರ್ಜನ ಪ್ರದೇಶದಲ್ಲಿ ಪಾರ್ಕ್ ಮಾಡಿದ್ದ ಕಾರಲ್ಲಿ ಕೋಟಿ ಕೋಟಿ ಪತ್ತೆ

ಅಂಕೋಲಾ: ತಾಲೂಕಿನಲ್ಲಿ ಹಾದು ಹೋಗಿರುವ ರಾ.ಹೆ 63 ರಂಚಿನ ರಾಮನಗುಳಿ -ಕೊಡ್ಲಗದ್ದೆ ವ್ಯಾಪ್ತಿಯ ಜನಸಂಚಾರ ಕಡಿಮೆ ಇರುವ ಪ್ರದೇಶದಲ್ಲಿ ವಾರಸುದಾರರಿಲ್ಲದ ಬಿಳಿ ಬಣ್ಣದ ಕಾರೊಂದು ಬಹು ಹೊತ್ತಿನಿಂದ ನಿಂತಿರುವುದು ಕಂಡುಬಂದಿದ್ದು , ಇದರಿಂದ ಅನುಮಾನಗೊಂಡ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು , ಕಾರನ್ನು ವಶಕ್ಕೆ ಪಡೆದು ಕಾನೂನು ಕ್ರಮ ಮಂದುವರಿಸಿದ್ದರು. ಈ ವೇಳೆ ಕಾರಿನಲ್ಲಿ ನೋಟಿನ ಕಂತೆ ಕಂತೆಗಳಿರುವುದು ( ನಗದು ಹಣ ) ಕಂಡು ಪೊಲೀಸರೇ ಕೆಲ ಕಾಲ ಶಾಕ್ ಆಗುವಂತೆ ಆಗಿತ್ತು ಎನ್ನಲಾಗಿದೆ.
ನಂತರ ಕೆಮರಾ ಎದುರು ಅದನ್ನು ಹೊರ ತೆಗೆದು ಒಳ ಒಯ್ದು ಅದನ್ನು ಪಂಚರ ಸಮಕ್ಷಮ ಎಣಿಕೆ ಮಾಡಲು ಕೂತಾಗ ಕೆಲ ತಾಸುಗಳೇ ಕಳೆದು ಹೋಗಿ ಪೊಲೀಸರೇ ಸುಸ್ತಾಗುವಂತಾಗಿತ್ತು ಎನ್ನಲಾಗಿದೆ.ಅಷ್ಟೊಂದು ಭಾರಿ ಪ್ರಮಾಣದಲ್ಲಿ ಅಂದರೆ ಅಂದಾಜು (ಸುಮಾರು) 1 ಕೋಟಿ 15 ಲಕ್ಷ ನಗದು ಹಣವನ್ನು ಪೊಲೀಸರು ಜಪ್ತು ಮಾಡಿದ್ದಾರೆ ಎನ್ನಲಾಗಿದ್ದು ಈ ಕುರಿತು ಅಧಿಕೃತ ಅಂಕಿ ಅಂಶಗಳು ತಿಳಿದು ಬರಬೇಕಿದೆ.
ಆದರೆ ಪೊಲೀಸರು ವಶಪಡಿಸಿಕೊಂಡಿರುವ ಈ ಬಿಳಿ ಬಣ್ಣದ ಕ್ರೇಟಾ ಕಾರಿನ ನೊಂದಣಿ ಸಂಖ್ಯೆ ಮತ್ತು ವಾಹನದ ಮಾಡೆಲ್ ಗೆ ಮ್ಯಾಚ್ ಆಗದಿರುವುದು ಮತ್ತು ಕಾರಿನ ಒಳಗಡೆ ಮತ್ತೆ ಬೇರೆ ಬೇರೆ ನಂಬರ್ ಪ್ಲೇಟ್ ಗಳಿರುವುದು ಪತ್ತೆಯಾಗಿದೆ ಎನ್ನಲಾಗಿದ್ದು ಹವಾಲಾ ಮಾದರಿಯಲ್ಲಿ ಅಕ್ರಮವಾಗಿ ಹಣ ಸಾಗಿಸಲು ಮತ್ತು ಪೊಲೀಸರ ದಿಕ್ಕು ತಪ್ಪಿಸಲು ನಂಬರ ಪ್ಲೇಟ್ ಬದಲಾಯಿಸಿ ಕಾರು ಚಲಾಯಿಸುತ್ತಿರುವ ಶಂಕೆ ವ್ಯಕ್ತವಾದಂತಿದೆ. ಇಷ್ಟೇ ಅಲ್ಲದೇ ಕಾರಿನ ಸೀಟ್ , ಮತ್ತಿತರೆಡೆ ಮೇಲ್ನೋಟಕ್ಕೆ ಯಾರಿಗೂ ಅರಿವಿಗೂ ಬಾರದಂತೆ ಪ್ರತ್ಯೇಕ ಕಂಪಾರ್ಟಮೆಂಟ್ ಮಾಡಿ ಅಲ್ಲಿ ಹಣದ ಕಂತೆ ಕಂತೆಗಳನ್ನು ಹುದುಗಿಸಿಟ್ಟಿರುವುದು , ಹಲವು ಸಂಶಯಕ್ಕೆ ಎಡೆಮಾಡಿಕೊಟ್ಟಂತಿದೆ ಎಂಬ ಮಾತು ಸ್ಥಳೀಯರಿಂದ ಕೇಳಿ ಬಂದಂತಿದೆ.