ವಿಶ್ವಕರ್ಮರಿಗೆ ಸೇರಿದ 8 ಅಂಗಡಿಗಳಿಗೆ ಜಾವ ಆಕಸ್ಮಿಕ ಬೆಂಕಿ: 1 ಕೋಟಿ 41 ಲಕ್ಷ ರೂ.ಗಳಷ್ಟು ನಷ್ಟ

ಕಲಬುರಗಿ:ಜೇವರ್ಗಿ ಪಟ್ಟಣದ ಬುಟ್ನಾಳ್ ರಸ್ತೆಯಲ್ಲಿರುವ ವಿಶ್ವಕರ್ಮರಿಗೆ ಸೇರಿದ 8 ಅಂಗಡಿಗಳು ಸೋಮವಾರ ಬೆಳಗಿನ ಜಾವ ಆಕಸ್ಮಿಕ ಬೆಂಕಿ ತಗುಲಿ ಅಂಗಡಿಗಳು ಆಹುತಿಯಾಗಿದ್ದು, ಸುಮಾರು 1 ಕೋಟಿ 41 ಲಕ್ಷ ರೂ.ಗಳಷ್ಟು ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ.
ದೇವಿಂದ್ರ ವಿಶ್ವಕರ್ಮ (5 ಲಕ್ಷ 98 ಸಾವಿರ), ಮನೋಹರ್ ವಿಶ್ವಕರ್ಮ (7 ಲಕ್ಷ 41 ಸಾವಿರ), ಶ್ರೀಶೈಲ್ ವಿಶ್ವಕರ್ಮ (2 ಲಕ್ಷ 55 ಸಾವಿರ), ಪ್ರಕಾಶ್ ಬಡಿಗೇರ್ (4 ಲಕ್ಷ 59 ಸಾವಿರ), ಮೋಹನ್ ಜಿ. ಬಡಿಗೇರ್ (36 ಲಕ್ಷ 5 ಸಾವಿರ), ಬಸವರಾಜ್ ಸಾತಖೇಡ್ (7 ಲಕ್ಷ 70 ಸಾವಿರ), ವಿಶ್ವರಾಜ್ (3 ಲಕ್ಷ 38 ಸಾವಿರ) ಅವರೂ ಸೇರಿದಂತೆ ಒಟ್ಟು 8 ಅಂಗಡಿಗಳು ಬೆಂಕಿಗೆ ಆಹುತಿಯಾಗಿ ಒಟ್ಟು 1 ಕೋಟಿ 41 ಲಕ್ಷ ರೂ.ಗಳಷ್ಟು ನಷ್ಟವಾಗಿದೆ ಎಂದು ಹೇಳಲಾಗಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೆಂಕಿ ಅವಘಡದ ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ಶಮನಗೊಳಿಸಿದರು. ಅದಾಗಲೆ ಕೋಟಿಗೂ ಹೆಚ್ಚಿನ ರೂ.ಗಳ ಬೆಲೆ ಬಾಳುವ ಯಂತ್ರೋಪಕರಣಗಳು, ಸಾಗವಾನಿ ಬಾಗಿಲು, ಕಿಡಕಿ, ಹಾಗೂ ಎರಡು ದ್ವಿಚಕ್ರ ವಾಹನ ಸೇರಿದಂತೆ ಅಂಗಡಿಗಳು ಸುಟ್ಟು ಕರಕಲಾಗಿದ್ದವು. ಹೀಗಾಗಿ ಅದರ ಮೇಲೆಯೆ ಉಪ ಜೀವನ ನಡೆಸುತ್ತಿದ್ದ ವಿಶ್ವಕರ್ಮ ಸಮಾಜದ ಕಾರ್ಮಿಕರು ಬೀದಿ ಪಾಲಾದಂತಾಗಿದೆ. ಶಾರ್ಟ್ ಸಕ್ರ್ಯೂಟ್‍ನಿಂದ ಈ ಘಟನೆ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ತಹಸಿಲ್ದಾರ್ ಮಲ್ಲಣ್ಣ ಯಲಗೋಡ್, ಪಿಎಸ್‍ಐ ಗಜಾನನ್ ಬಿರಾದಾರ್ ಅವರು ಭೇಟಿ ನೀಡಿದ್ದು ಪರಿಶೀಲಿಸಿದರು.