March 20, 2025

ಕುಂಭಮೇಳದಲ್ಲಿ ಸರ್ವಧರ್ಮದ ಸೌಹಾರ್ದದ ರಾಯಭಾರಿ ನಮ್ಮ ಯು.ಟಿ. ಖಾದರ್

0

ನಮ್ಮ ಕರ್ನಾಟಕದ ವಿಧಾನ ಸಭಾಧ್ಯಕ್ಷರಾದ ಮಾನ್ಯ ಯು.ಟಿ ಖಾದರ್ ರವರು ಯು.ಪಿ.ಯ ವಿಧಾನಸಭಾಧ್ಯಕ್ಷರ ಆಹ್ವಾನದ ಮೇರೆಗೆ ಪ್ರಯಾಗ್ ರಾಜ್ ನ ಕುಂಭಮೇಳದಲ್ಲಿ ಭಾಗವಹಿಸಿದ್ದಾರೆ.   ಇತ್ತೀಚಿನ ದಿನಗಳಲ್ಲಿ ಯು.ಟಿ.ಕೆ.ಯವರು ಸರ್ವ ಧರ್ಮೀಯರ ಸೌಹಾರ್ದದ ರಾಯಭಾರಿಯಾಗಿ ಹೆಚ್ಚೆಚ್ಚು ಮುನ್ನೆಲೆಗೆ ಬರುತ್ತಿರುವುದು ಕರ್ನಾಟಕ ರಾಜ್ಯದ ಒಂದು ಅಸ್ಮಿತೆಯಾಗಿದೆ. ದ.ಕ. ಜಿಲ್ಲೆಯ ತುಳುನಾಡಿನ ಅಭಿಮಾನವಾಗಿದೆ. ಇತ್ತೀಚೆಗೆ ಇವರು ವ್ಯಾಟಿಕನ್ ಸಿಟಿಯಲ್ಲಿ ನಡೆದ  ಶ್ರೀ ನಾರಾಯಣಗುರು ವಿಶ್ವಸಮ್ಮೇಳನದಲ್ಲಿ ಭಾಗವಹಿಸಿದ್ದಲ್ಲದೆ  ಕ್ರೈಸ್ತರ ಜಾಗತಿಕ ಗುರು ಪೋಪ್ ರವರನ್ನು ಭೇಟಿಯಾಗಿ ಬಂದಿರುವುದು ನಮಗೆಲ್ಲಾ ಗೊತ್ತಿದೆ.

ಭಾರತದಂತಹ ಸರ್ವ ಧರ್ಮೀಯರ ದೇಶದಲ್ಲಿ ಜನ ಪ್ರತಿನಿಧಿಯೊಬ್ಬರು ಎಲ್ಲಾ ಧರ್ಮೀಯರ ಆಹ್ವಾನ ಸ್ವೀಕರಿಸಬೇಕಾದುದು ಕರ್ತವ್ಯವಾಗಿದೆ. 
ಯು.ಟಿ. ಖಾದರ್ ರವರು  ವೈಯಕ್ತಿಕವಾಗಿ ಮುಸ್ಲಿಮನಾಗಿರಬಹುದು, ಆದರೆ ರಾಜಕೀಯವಾಗಿ ಮುಸ್ಲಿಮರ ಅಥವಾ ಇಸ್ಲಾಮ್ ಧರ್ಮದ ಪ್ರತಿನಿಧಿಯಲ್ಲ, ಜಾತ್ಯಾತೀತ ದೇಶದಲ್ಲಿರುವ ಜಾತ್ಯಾತೀತ ಶಾಸನಸಭೆಯೊಂದರ ಅಧ್ಯಕ್ಷ. ಸರ್ವ ಧರ್ಮೀರನ್ನೊಳಗೊಂಡ ಒಂದು ಬೃಹತ್ ಸಮುದಾಯದ ಪ್ರತಿನಿಧಿ. ಆದ್ದರಿಂದ ಎಲ್ಲರ ಸುಖ ದುಃಖ, ಸಭೆ ಸಮಾರಂಭಗಳಲ್ಲಿ ಭಾಗಿಯಾಗುವುದು ಅವರ ಕರ್ತವ್ಯ.

ಓರ್ವ ವ್ಯಕ್ತಿ ವ್ಯಕ್ತಿಗತವಾಗಿ ಒಂದು ನಿರ್ಧಿಷ್ಠ ಧರ್ಮದ ಅನುಯಾಯಿಯಾಗಿದ್ದುಕೊಂಡೇ ಸಾರ್ವಜನಿಕ ರಂಗದಲ್ಲಿ ಎಲ್ಲಾ ಧರ್ಮೀಯರ ಪ್ರತಿನಿಧಿಯಾಗಿ, ಪ್ರಿಯ ವ್ಯಕ್ತಿಯಾಗಿ, ಬಹುಜನರ ಬಂಧುವಾಗಿ  ಬಾಳಬಹುದೆಂಬುದಕ್ಕೆ ಯು.ಟಿ. ಖಾದರ್ ಒಂದು ಸ್ಪಷ್ಟ ಉದಾಹರಣೆ. ವೈಯಕ್ತಿಕವಾಗಿ ಕಟ್ಟಾ ಇಸ್ಲಾಮ್ ಧರ್ಮದ ಅನುಯಾಯಿಯಾಗಿರುವ ಅವರು ಪ್ರತಿ ವರ್ಷ ಮೂರ್ನಾಲ್ಕು ಬಾರಿ ಮಕ್ಕಾಕ್ಕೆ ತೆರಳಿ ಉಮ್ರಾ ಮಾಡಿ ಬರುತ್ತಾರೆ. ಅವರ ಮಗಳನ್ನು ಖುರ್ ಆನ್ ಹಾಫಿಳ್ ಮಾಡಿದ್ದಾರೆ. ಧರ್ಮ, ಜಾತಿ, ಭಾಷೆ, ವರ್ಗ, ವರ್ಣಗಳ ಮೇರೆ ಇಲ್ಲದ ಮಾನವೀಯ ಸೋದರತೆಯಲ್ಲೂ ನಿಷ್ಠೆಯುಳ್ಳ ಯು.ಟಿ. ಖಾದರ್ ರವರು ತಾನು ಸರ್ವಜನರ ಸೊತ್ತು ಎಂಬ ಪ್ರಜ್ಞಾವಂತಿಕೆಯುಳ್ಳ ಧೀಮಂತ ವ್ಯಕ್ತಿಯಾಗಿದ್ದಾರೆ.

 

 

ಯುಟಿಕೆಯವರು ತನ್ನ ಸ್ವಕ್ಷೇತ್ರವಾದ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲೂ ಇದೇ ರೀತಿ ಜಾತ್ಯಾತೀತ ವರ್ತನೆಯಿಂದ ಜನಾನುರಾಗಿಯಾಗಿದ್ದಾರೆ. ಚರ್ಚ್, ದೇವಸ್ಥಾನ, ಮಸೀದಿ ಮುಂತಾದ ಎಲ್ಲಾ ಧರ್ಮಗಳ ಪೂಜಾ ಸ್ಥಳಗಳಿಗೆ ಸರಕಾರದಿಂದ ಅನುದಾನ ಕೊಡಿಸುತ್ತಾರೆ, ಎಲ್ಲಾ ಕಡೆಗಳಿಗೂ ಭೇಟಿ ಮಾಡುತ್ತಾರೆ. ಪಕ್ಷ ಬೇಧ ಕೂಡಾ ಅವರಿಗೆ ಇಲ್ಲ. ಕಾಂಗ್ರೆಸ್ ಪಕ್ಷದವರಾಗಿದ್ದರೂ ಸರಕಾರದ ಸವಲತ್ತನ್ನು ಕೊಡಿಸುವಲ್ಲಿ ಕಾಂಗ್ರೆಸ್ಸೇತರರು ಎಂಬ ಭಾವ ತಳೆಯುವುದಿಲ್ಲ. ವೈಯಕ್ತಿಕವಾಗಿ ಎಲ್ಲರೊಡನೆ ಆತ್ಮೀಯತೆಯಿಂದ ವರ್ತಿಸುವುದರಿಂದ ಪಕ್ಷ ವಿರೋಧಿಗಳೂ ಕೂಡಾ ಖಾದರ್ ರವರ ವ್ಯಕ್ತಿತ್ವವನ್ನು ಪ್ರಶಂಸಿಸುತ್ತಾರೆ. ದ.ಕ. ಜಿಲ್ಲೆಯಲ್ಲೂ ರಾಜ್ಯದ ಇತರ ಜಿಲ್ಲೆಗಳಲ್ಲೂ ಅವರದ್ದು ಇದೇ ನೀತಿ‌‌. ವಿಧಾನ ಸಭೆಯಲ್ಲೂ ಕೂಡಾ ಅವರು ಎಲ್ಲಾ ಪಕ್ಷದವರಿಗೂ ಸಮಾನ ಗೌರವ ಕೊಡುತ್ತಾರೆ. ತನ್ನ ಪಕ್ಷದ ಪರ ವಹಿಸದೆ ನ್ಯಾಯಯುತವಾಗಿ ಸಂವಿಧಾನಾತ್ಮಕ ತೀರ್ಪು ಕೊಡುತ್ತಾರೆ.

ಮತೀಯ ಭ್ರಾತೃತ್ವದ ಪ್ರತಿರೂಪವಾಗಿ,  ಸಾಮರಸ್ಯದ ಬೆಸುಗೆಯಾಗಿ ಸರ್ವ ಧರ್ಮೀಯರಿಂದ ಸರ್ವಾದರಣೀಯರಾಗಿ ವಿರಾಜಿಸುತ್ತಿರುವ ಮಾನ್ಯ ಯು.ಟಿ‌‌. ಖಾದರ್ ರವರು  ಕರ್ನಾಟಕ ರಾಜ್ಯಕ್ಕೊಂದು ಹೆಮ್ಮೆಯಾಗಿದ್ದಾರೆ.   ಯು.ಟಿ. ಖಾದರ್ ರವರ ಅಪ್ಪಟ ಜಾತ್ಯಾತೀತ ನೀತಿ ದೇಶದಾದ್ಯಂತ ಪ್ರಚಾರ ಪಡೆಯುತ್ತಿದೆ ಎಂಬುದಕ್ಕೆ ಕುಂಭಮೇಳಕ್ಕೆ ಅವರಿಗೆ ದೊರೆತ ಆಹ್ವಾನ ಕೂಡಾ ಒಂದು ನಿದರ್ಶನವಾಗಿದೆ. ಯು.ಟಿ‌‌. ಖಾದರ್ ರವರು ಜಾತ್ಯಾತೀತ ದೇಶದಲ್ಲಿ ರಾಜಕಾರಣಿಗಳು ಹೇಗಿರಬೇಕು ಎಂಬುದಕ್ಕೆ ಒಂದು ಉತ್ತಮ ಮಾದರಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!