ಪಿಸ್ತೂಲ್, ಚಾಕು, ಸರ್ಜಿಕಲ್ ಬ್ಲೇಡ್ ಹಿಡಿದು SBI ಬ್ಯಾಂಕ್ ದರೋಡೆಗೆ ಯತ್ನ: ದರೋಡೆಗೆ ಮೊದಲೇ ಬ್ಯಾಂಕ್ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದ ವ್ಯಕ್ತಿ
ಕಾನ್ಪುರ: ಬ್ಯಾಂಕ್ ದರೋಡೆ ಮಾಡಲು ಬಂದಿದ್ದ ವ್ಯಕ್ತಿ ಬ್ಯಾಂಕ್ ನೌಕರರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಪಿಸ್ತೂಲ್, ಚಾಕು, ಸರ್ಜಿಕಲ್ ಬ್ಲೇಡ್ ಹಿಡಿದು ಸೈಕಲ್ ಮೇಲೆ ಬ್ಯಾಂಕ್ ದರೋಡೆಗೆ ಬಂದಿದ್ದ ಎನ್ನಲಾಗಿದೆ. ಸಿಕ್ಕಿಬಿದ್ದ ಬಳಿಕವೂ ಆತ ಒಂದು ಚೂರು ಪಶ್ಚಾತಾಪ ಪಡದೆ ದುರ್ವರ್ತನೆ ತೋರಿ ಜೈಲಿಗೆ ಹೋಗಿದ್ದಾನೆ.
ಕಾನ್ಪುರದಲ್ಲಿ, ಶನಿವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಯುವಕನೊಬ್ಬ ಬೈಸಿಕಲ್‌ನಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಘಟಂಪುರದ ಪತ್ತಾರ ಶಾಖೆಯ ಹೊರಗೆ ಬಂದಿದ್ದ. ಇದಾದ ಬಳಿಕ ಪಿಸ್ತೂಲ್, ಚಾಕು, ಕೊಡಲಿ ಮತ್ತು ಸರ್ಜಿಕಲ್ ಬ್ಲೇಡ್‌ನೊಂದಿಗೆ ಬ್ಯಾಂಕ್‌ಗೆ ನುಗ್ಗಿದ್ದಾನೆ. ಸಿಬಂದಿ ತಡೆದಾಗ ಆತ ಚಾಕುವಿನಿಂದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾನೆ.
ಇದಾದ ಬಳಿಕ ಬ್ಯಾಂಕ್ ಮ್ಯಾನೇಜರ್, ಕ್ಯಾಷಿಯರ್ ಸೇರಿದಂತೆ ಬ್ಯಾಂಕ್ ನೌಕರರು ಯುವಕನನ್ನು ಬಹಳ ಕಷ್ಟಪಟ್ಟು ನಿಯಂತ್ರಿಸಿ ಹಗ್ಗದಿಂದ ಕಟ್ಟಿ ಹಾಕಿದ್ದಾರೆ. ಈ ವೇಳೆ ಬ್ಯಾಂಕ್ ಮ್ಯಾನೇಜರ್ ಸೇರಿದಂತೆ ಮೂವರು ಬ್ಯಾಂಕ್ ಉದ್ಯೋಗಿಗಳು ಗಾಯಗೊಂಡಿದ್ದಾರೆ. ಈ ವೇಳೆ ಆರೋಪಿ ಯುವಕನೂ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.




